ಬೆಳ್ತಂಗಡಿ, ಮಾ 14 ( Daijiworld News/MSP) : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಲಾಯಿಲ ಪಡ್ಲಾಡಿ ಇಲ್ಲಿ ದಲಿತ ಮಕ್ಕಳ ಮೇಲೆ ಜಾತಿ ಅಸ್ಪೃಶ್ಯತೆ ಮಾಡಲಾದ ಅಮಾನವೀಯ ಘಟನೆ ಕಳೆದ ಫೆಬ್ರವರಿ 29 ರಂದು ನಡೆದಿದ್ದು ಈ ಬಗ್ಗೆ ಆರೋಪಿ ಶಿಕ್ಷಕಿಯವಿರುದ್ದ ಕೊನೆಗೂ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಲಾಯಿಲ ಗ್ರಾಮದ ಹಿ.ಪ್ರಾ.ಶಾಲೆ ಲಾಯಿಲ ಇಲ್ಲಿ ಸಮೀಪದ ಮೇಲ್ಜಾತಿಯ ಕುಟುಂಬದ ಗೃಹಪ್ರವೇಶ ಕಾರ್ಯಕ್ರಮ ಫೆ ೨೬ ರಂದು ನಡೆದಿತ್ತು. ಈ ಕಾರ್ಯಕ್ರಮಕ್ಕೆ ಶಾಲೆಯ ಹಿರಿಯ ಶಿಕ್ಷಕಿ ಉಮಾ ರಾವ್ ಅವರು ದಲಿತ ಸಮುದಾಯಕ್ಕೆ ಸೇರಿದ ಮಕ್ಕಳನ್ನು ಶಾಲೆಯಲ್ಲಿಯೇ ಬಿಟ್ಟು ಉಳಿದ ಮಕ್ಕಳನ್ನು ಕರೆದುಕೊಂಡು ಹೋಗುವ ಮೂಲಕ ಎಳೆಯ ವಯಸ್ಸಿನ ಮಕ್ಕಳ ನಡುವೆ ಜಾತಿ ಅಸ್ಪ್ರಶ್ಯತೆಯನ್ನು ಪ್ರದರ್ಶಿಸಿದ್ದರು.
ಮಕ್ಕಳು ಮನೆಗೆ ಬಂದು ತಮ್ಮನ್ನು ಮಾತ್ರ ಶಾಲೆಯಲ್ಲಿ ಬಿಟ್ಟು ಉಳಿದವರನ್ನು ಕರೆದುಕೊಂಡು ಹೋದ ವಿಚಾರ ಹೇಳಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪೋಷಕರು ದೂರು ನೀಡಿದ್ದರೂ ಅವರು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ ಎನ್ನಲಾಗಿದ್ದು ಈ ಹಿನ್ನಲೆಯಲ್ಲಿ ಇದೀಗ ನೊಂದ ಮಕ್ಕಳ ಪೋಷಕರು ಬೆಳ್ತಂಗಡಿ ಪೋಲೀಸರಿಗೆ ದೂರು ನೀಡಿದ್ದರು. ಇದೀಗ ಪೋಲೀಸರು ಪ್ರಕರಣದ ಬಗ್ಗೆ ಪ್ರಾಧಮಿಕ ತನಿಖೆಯನ್ನು ನಡೆಸಿದ್ದು ಆರೋಪಿ ಶಿಕ್ಷಕಿ ಉಮಾ ರಾವ್ ಅವರ ವಿರುದ್ದ ದಲಿತ ನಿಂದನೆ ಹಾಗೂ ಸಾರ್ವಜನಿಕ ಅಶಾಂತಿಗೆ ಕಾರಣವಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು ಈ ಬಗ್ಗೆ ಶಾಂತಿ ಸಭೆಯನ್ನು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಡೆಸುವ ಚಿಂತನೆ ನಡೆಸಿದ್ದರೂ ಅದು ವಿವಿಧ ಕಾರಣಗಳಿಂದಾಗಿ ಸಾಧ್ಯವಾಗಿರಲಿಲ್ಲ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.