ಮಂಗಳೂರು , ಮಾ.14 (DaijiworldNews/PY) : ಕೆಎಸ್ಆರ್ಟಿಸಿ ಜಂಕ್ಷನ್ ಸಮೀಪ ಬಸ್ಗೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಎಸ್ಡಿಎಂ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿ ರಾಮನಗರ ಜಿಲ್ಲೆಯ ರಾಮನಗರ ನಿವಾಸಿ ಕುಶಾಲ್ ಕುಮಾರ್ (19) ಎನ್ನಲಾಗಿದೆ.
ಕುಶಾಲ್ ಕುಮಾರ್ ಅವರು ಗುರುವಾರ ಬೆಳಗ್ಗೆ ತನ್ನ ಪಿಜಿಯಿಂದ ಬೈಕ್ನಲ್ಲಿ ಜಿಮ್ಗೆ ಲಾಲ್ಭಾಗ್ ಕಡೆ ಹೋಗುತ್ತಿದ್ದ ಸಂದರ್ಭ ಕೆಎಸ್ಆರ್ಟಿಸಿ ಜಂಕ್ಷನ್ನಲ್ಲಿ ಡಿಪೋದಿಂದ ಬರುತ್ತಿದ್ದ ಬಸ್ ಡಿಕ್ಕಿಯಾಗಿದೆ. ಡಿಕ್ಕಿಯಾದ ಪರಿಣಾಮ ಕುಶಾಲ್ ಅವರ ತಲೆಯ ಹಿಂಭಾಗಕ್ಕೆ ಗಾಯವಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತೀಮ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಶಾಲ್ ಅವರು ಶನಿವಾರ ಮೃತಪಟ್ಟಿದ್ದಾರೆ.
ಅಂಗಾಗ ದಾನ : ಮಂಗಳೂರಿಗೆ ಗುರುವಾರವೇ ಕುಶಾಲ್ ಕುಮಾರ್ ಅವರ ಕುಟುಂಬ ಆಗಮಿಸಿತ್ತು. ವೈದ್ಯರು, ಕುಶಾಲ್ ಕುಮಾರ್ ಅವರು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿದ ನಂತರ ಕುಶಾಲ್ ಅವರ ಕುಟುಂಬ ಅಂಗಾಗ ದಾನ ಮಾಡಲು ತೀಮಾನಿಸಿತ್ತು. ಅದರಂತೆ ಮಂಗಳೂರಿಗೆ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ವೈದ್ಯರ ತಂಡ ಆಗಮಿಸಿ ಶಸ್ತ್ರಚಿಕಿತ್ಸೆ ನಡೆಸಿ, ಎರಡು ಕಿಡ್ನಿ, ಲಿವರ್, ಹೃದಯ, ಶ್ವಾಸಕೋಶ, ಕಣ್ಣುಗಳನ್ನು ತೆಗೆದು ಬೆಂಗಳೂರಿಗೆ ರವಾನಿಸಿದೆ.
ಅಂಗಾಂಗ ದಾನ ಪ್ರಕ್ರಿಯೆ ಮುಗಿದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಕುಟುಂಬದವರಿಗೆ ನೀಡಲಾಯಿತು.
ಮೃತದೇಹವನ್ನು ಮಧ್ಯಾಹ್ನ ನಂತರ ರಾಮನಗರಕ್ಕೆ ಕೊಂಡೊಯ್ಯಲಾಯಿತು. ಮೃತ ಕುಶಾಲ್ ಅವರಿಗೆ ತಂದೆ, ತಾಯಿ, ಸಹೋದರಿಯರು ಇದ್ದಾರೆ.
ನಗರದ ಪಾಂಡೇಶ್ವರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.