ಮಂಗಳೂರು, ಮಾ. 15 (Daijiworld News/MB) : ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಶನಿವಾರ ರಾತ್ರಿ ತೆರಳಬೇಕಾಗಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು 4 ಗಂಟೆಗಳ ಕಾಲ ತಡವಾದ ಘಟನೆ ನಡೆದಿದೆ.
8:15ಕ್ಕೆ ತೆರಳಬೇಕಾಗಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ರಾತ್ರಿ 12 ಗಂಟೆಯಾದರೂ ತೆರಳದ ಕಾರಣದಿಂದಾಗಿ ಪ್ರಯಾಣಿಕರು ಸಂಕಷ್ಟಕ್ಕೀಡಾದರು.
ಎಂದಿನಂತೆ ವಿಮಾನ ನಿಲ್ದಾಣದ ಬೋರ್ಡಿಂಗ್ ಪ್ರಕ್ರಿಯೆ ಮುಗಿದು ವಿಮಾನ ಏರಿದ ಪ್ರಯಾಣಿಕರು 2 ಗಂಟೆಗಳ ಕಾಲ ವಿಮಾನದಲ್ಲೇ ಕುಳಿತುಕೊಳ್ಳವಂತಾಯಿತು. ಬಳಿಕ ಈ ಬಗ್ಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಅಧಿಕಾರಿಗಳಿಗೆ ಕೆಲವು ಪ್ರಯಾಣಿಕರು ದೂರು ನೀಡಿದ್ದು, ಅವರು ಸ್ಪಷ್ಟ ವಿವರಣೆ ನೀಡಲಿಲ್ಲ ಎಂದು ಪ್ರಯಾಣಿಕರೋರ್ವರು ತಿಳಿಸಿದ್ದಾರೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ಅಧಿಕಾರಿಯೋರ್ವರು ವಿಮಾನದಲ್ಲಿ ತೊಂದರೆ ಉಂಟಾದ ಕಾರಣದಿಂದಾಗಿ ವಿಮಾನವು ತಡವಾಗಿ ಹೊರಡಲಿದೆ. ರಾತ್ರಿ 1 ಗಂಟೆಗೆ ಇಲ್ಲಿಂದ ಹೊರಡುತ್ತದೆ ಎಂದು ತಿಳಿಸಿದ್ದಾರೆ ಎಂದು ಪ್ರಯಾಣಿಕರೋರ್ವರು ಹೇಳಿದ್ದಾರೆ.
ಈ ಕುರಿತಾಗಿ ದಾಯ್ಜಿವರ್ಲ್ಡ್ಗೆ ಮಾಹಿತಿ ನೀಡಿದ ಅಧಿಕಾರಿಗಳು ವಿಮಾನವು ಒಂದು ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ತೆರಳಿದೆ. ವಿಮಾನದಲ್ಲಿ ಕೆಲವು ತೊಂದರೆಗಳು ಇದ್ದ ಕಾರಣದಿಂದಾಗಿ ತಡವಾಗಿದೆ ಎಂದು ತಿಳಿಸಿದ್ದಾರೆ.