ಕುಂದಾಪುರ, ಸೆ18: ಮನಸ್ಸಿಗೆ ಮುದ ನೀಡುವ ಕಾಯಕ ಅಂದ್ರೆ, ಅದು ಕೃಷಿ. ಅವಿರತವಾಗಿ ಶ್ರಮ ಪಡುವ ಮೂಲಕ ರೈತ ಕೃಷಿ ಮಾಡಿ ಸುಂದರ ಬದುಕು ಕಟ್ಟಿಕೊಳ್ಳುತ್ತಾನೆ. ತುತ್ತು ಅನ್ನ ತಿನ್ನಬೇಕು ಅಂದ್ರೆ ರೈತ ಬೆಳೆ ಬೆಳೆಯಲೇಬೇಕು. ಸಸಿಯೊಂದು ಮೊಳಕೆಯೊಡೆದು, ಎಲೆ ಬಿಟ್ಟು ಬೆಳೆಯುತ್ತಿರುವುದು ನೋಡುವುವಾಗ ಯಾವ ರೈತ ತಾನೇ ಖುಷಿ ಪಡಲ್ಲ. ಯಾವುದೇ ವಸ್ತುವಿನಿಂದ ಸಿಗದ ಮನ ಸಂತೃಪ್ತಿಯನ್ನು ಕೃಷಿಯಿಂದ ಪಡೆಯುತ್ತಾನೆ ನಮ್ಮ ರೈತ. ಇದಕ್ಕೆ ಪೂರಕ ಅನ್ನುವಂತೆ ಇಲ್ಲೊಬ್ಬ ರೈತ ಮನೆಯ ಅಂಗಳದಲ್ಲೇ ಭತ್ತ ಬೇಸಾಯ ಮಾಡುವ ಮೂಲಕ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿದ್ದಾರೆ.
ಕೃಷಿ ಕುಟುಂಬದಿಂದ ಬೆಳೆದು ಬಂದ ಸಂಜೀವ ಪೂಜಾರಿ ಮನೆಯ ಅಂಗಳದಲ್ಲಿಯೇ ಭತ್ತ ಬೆಳೆಯುವ ಮೂಲಕ ಕೃಷಿಯ ಜೊತೆಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡಿದ್ದಾರೆ. ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಮತ್ತು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿರುವ ಸಂಜೀವ ಪೂಜಾರಿ ಅವರು ಕುಂದಾಪುರದ ವಂಡ್ಸೆ ನಿವಾಸಿ. ಸಂಜೀವ ಪೂಜಾರಿ ಅವರ ಮನೆಯ ಅಂಗಳದಲ್ಲಿ ಸುಮಾರು 4 ಸೆಂಟ್ಸ್ ಸ್ಥಳವಿತ್ತು. ಈ ಸ್ಥಳದಲ್ಲಿ ಯಾಕೆ ಭತ್ತ ಬೇಸಾಯ ಮಾಡಬಾರದು ಎಂದು ಯೋಚನೆ ಮಾಡಿದ ಅವರು, ಇಕ್ಕಟ್ಟಾದ ಎತ್ತರದ ಸ್ಥಳವನ್ನು ಗದ್ದೆಯ ರೀತಿ ಹದಗೊಳಿಸಿದರು. ಹದಗೊಳಿಸಿದ ಅ ಸ್ಥಳದಲ್ಲಿ ಎಂ.ಓ-4 ತಳಿಯ ಭತ್ತದ ಸಸಿಯನ್ನು ವಿಶಿಷ್ಟ ಮಾದರಿಯಲ್ಲಿ ನಾಟಿ ಮಾಡಿದರು. ಕೃಷಿಯ ಬಗ್ಗೆ ವಿಶೇಷ ಆಸಕ್ತಿ ಇರುವ ಅವರು ಹೆಚ್ಚಿನ ಮುತುವರ್ಜಿಯಿಂದ ಬೆಳೆದ ಬೆಳೆಯನ್ನು ನಿರ್ವಹಣೆ ಮಾಡಿದರು. ಇದೀಗ ಇವರ ಶ್ರಮಕ್ಕೆ ತಥಾಸ್ತು ಅನ್ನುವಂತೆ, ಮನೆಯಂಗಳದ ಗದ್ದೆಯಲ್ಲಿ ನೆಟಿರುವ ಭತ್ತದ ಸಸಿ ಈಗ ತೆನೆ ಬಿಡಲು ಸನ್ನದ್ಧವಾಗಿ ನಿಂತಿದೆ. ಮಾತ್ರವಲ್ಲದೆ, ರಸ್ತೆಯ ಅಕ್ಕಪಕ್ಕ ಸಂಚರಿಸುವರ ಗಮನವನ್ನು ಈ ಅಂಗಳದ ಗದ್ದೆಯಲ್ಲಿ ಬೆಳೆದು ನಿಂತಿರುವ ಕೃಷಿ ಸೆಳೆಯುತ್ತಿದೆ.
ಮನೆಯ ಅಂಗಳದಲ್ಲಿ ಬೆಳೆದು ನಿಂತಿರುವ ಈ ಕೃಷಿಯಿಂದ ಲಾಭ ಇಲ್ಲದಿದ್ದರೂ ಮನೆಗೆ ಶೋಭೆ ತರುತ್ತದೆ. ಮನಸ್ಸಿಗೆ ಪ್ರಪುಲ್ಲತೆ ನೀಡುತ್ತದೆ ಅನ್ನುತ್ತಾರೆ ಸಂಜೀವ ಪೂಜಾರಿ. ಮನೆಯ ಅಂಗಳದಲ್ಲಿಯೇ ಇರುವ ಜಾಗವನ್ನು ಹದಗೊಳಿಸಿ ಕೃಷಿ ಮಾಡುವ ಮೂಲಕ ಕೃಷಿ ಪ್ರೇಮಿ ಸಂಜೀವ ಪೂಜಾರಿ ಅವರು ಎಕರೆ ಗಟ್ಟಲೆ ಕೃಷಿಭೂಮಿ ಇದ್ದು ಹಡೀಲು ಬಿಡುವವರಿಗೆ ಮಾದರಿಯಾಗಿ ನಿಂತಿದ್ದಾರೆ.