ಕಾಸರಗೋಡು, ಮಾ.15 (Daijiworld News/MB) : ಕೊರೊನಾ ವೈರಸ್ ನಿಯಂತ್ರಣದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು , ತಪಾಸಣೆ ಹಾಗೂ ನಿಗಾ ಇರಿಸಲಾಗಿದೆ. ಗಡಿ ಪ್ರದೇಶಗಳಲ್ಲಿ ಪ್ರಯಾಣಿಕರನ್ನು ತಪಾಸಣೆ ನಡೆಸಿ ಕಳುಹಿಸಲಾಗುತ್ತಿದೆ.
ಕೇರಳ , ಕರ್ನಾಟಕ, ತಮಿಳು ನಾಡು ಗಡಿಯಲ್ಲಿ ಆರೋಗ್ಯ ಇಲಾಖೆ , ಪೊಲೀಸ್ ವಿಶೇಷ ನಿಗಾ ಇರಿಸಿದೆ. ರೈಲು ನಿಲ್ದಾಣಗಳಲ್ಲೂ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದೆ.
ಡಿ ವೈ ಎಸ್ ಪಿ ಪಿ . ಬಾಲಕೃಷ್ಣನ್ ನಾಯರ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸರು ಕಾಸರಗೋಡು ರೈಲು ನಿಲ್ದಾಣದಲ್ಲಿ ರೈಲುಗಳಲ್ಲಿ ತಪಾಸಣೆ ನಡೆಸಿದ್ದಾರೆ. ಮಂಗಳೂರು - ಕೊಯಮುತ್ತೂರು ಸಿಟಿ ಎಕ್ಸ್ ಪ್ರೆಸ್ ನಲ್ಲಿ ಪ್ರಥಮ ತಪಾಸಣೆ ನಡೆಸಲಾಯಿತು.
ಈ ನಡುವೆ ಕೊರೊನಾ ಸೋಂಕಿನಿಂದಾಗಿ ಓರ್ವ ಮೃತಪಟ್ಟ ಕಲುಬುರಗಿಯಿಂದ ಇಂದು ಬೆಳಿಗ್ಗೆ ವಿದ್ಯಾರ್ಥಿಗಳನ್ನು ಕೇರಳಕ್ಕೆ ಕರೆ ತರಲಾಗಿದೆ. ಕೆ ಎಸ್ ಆರ್ ಟಿ ಸಿ ಯ ವಿಶೇಷ ಬಸ್ಸುಗಳಲ್ಲಿ ವಿದ್ಯಾರ್ಥಿಗಳನ್ನು ಮಂಗಳೂರಿಗೆ ತಲುಪಿಸಿ ಬಳಿಕ ಕೇರಳಕ್ಕೆ ಕರೆ ತರಲಾಯಿತು. ಬಳಿಕ ವಿದ್ಯಾರ್ಥಿಗಳನ್ನು ಕಾಸರಗೋಡು ಜನರಲ್ ಹಾಗೂ ಜಿಲ್ಲಾಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಲಾಯಿತು.