ವಿಟ್ಲ, ಮಾರ್ಚ್ 15 (DaijiworldNews/SM): ಸಾಂಕ್ರಾಮಿಕ ರೋಗಕ್ಕೆ ಭಯಭೀತರಾಗುವ ಬದಲು ಸಾವಧಾನವಾಗಿರಬೇಕು. ಸಾಮಾಜಿಕ ಬದ್ಧತೆಯ ನಿಟ್ಟಿನಲ್ಲಿ, ಸಾಂಕ್ರಾಮಿಕ ರೋಗ ತಡೆಗಟ್ಟುವ ಸಲುವಾಗಿ, ಸಮಾಜೋತ್ಸವ ಮುಂದೂಡಲಾಗಿದೆಯಾದರೂ, ಮತ್ತೆ ಹಿಂದು ಸಮಾಜೋತ್ಸವವು ವಿರಾಟ್ ಸ್ವರೂಪದಲ್ಲಿಯೇ ನಡೆಯಲಿದೆ ಎಂದು ಮಧ್ಯಪ್ರದೇಶದ ಭೋಪಾಲ್ ಸಂಸದೆ ಸಾಧ್ವೀ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.
ವಿಟ್ಲದಲ್ಲಿ ಮಾರ್ಚ್ ೧೫ರಂದು ನಡೆಯಬೇಕಿದ್ದ ಸಮಾಜೋತ್ಸವಕ್ಕಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಶನಿವಾರ ಪುತ್ತೂರಿನಲ್ಲಿ ತಂಗಿದ್ದರು. ಆದರೆ, ಕೊರೊನಾ ಮುಂಜಾಗೃತ ಕ್ರಮವಾಗಿ ರಾಜ್ಯ ಸರಕಾರ ರಾಜ್ಯಾದ್ಯಂತ ನಿಷೇಧಾಜ್ಞೆ ಹೊರಡಿಸಿದ ಹಿನ್ನಲೆಯಲ್ಲಿ ಸಮಾಜೋತ್ಸವ ಮುಂದೂಡಲ್ಪಟ್ಟಿದೆ, ಈ ಹಿನ್ನಲೆಯಲ್ಲಿ, ರವಿವಾರ ಮಧ್ಯಾಹ್ನ ವೇಳೆ ಅವರು ವಿಟ್ಲ ಪರಿಸರಕ್ಕೆ ಆಗಮಿಸಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಸಮಾಜೋತ್ಸವ ಸಮಿತಿ ಅಧ್ಯಕ್ಷ ಎಂ.ಹರೀಶ್ ನಾಯಕ್ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಸ್ವಾಗತಿಸುವಾಗ ತುಳಸಿ ಹಾರ ಹಾಕಿದ್ದು, ಅದರ ಸುಗಂಧವನ್ನು ಆಸ್ವಾಧಿಸಿದಾಗ ನನಗೆ ನಿರೋಗಿಯ ಅನುಭವವಾಯಿತು. ದೇಶದಲ್ಲಿ ಶ್ರೇಷ್ಠವಾದ ತುಳಸಿ, ಗೋವು, ಗಂಗಾಜಲವಿದ್ದು, ಇದು ರೋಗರಹಿತರನ್ನಾಗಿಸುವ ಅಮೃತ ಔಷಧೀಯ ವಸ್ತುಗಳು ಎಂದು ತಿಳಿಸಿದರು.
ಹಿಂದುತ್ವಕ್ಕಾಗಿ ಹಿಂದುತ್ವದ ಚೈತನ್ಯಕ್ಕಾಗಿ ಸಮಾಜೋತ್ಸವ ಆಯೋಜಿಸಲಾಗಿತ್ತು. ಆದರೆ ಕೊರೊನಾ ಭೀತಿಯ ಕಾರಣಕ್ಕೆ ಸರಕಾರ ಸಾರ್ವಜನಿಕ ಕಾರ್ಯಕ್ರಮವನ್ನು ನಿಷೇಧಿಸಿದೆ. ಕೊರೋನಾ ರೋಗದಿಂದ ಮೃತಪಟ್ಟವರ ಆತ್ಮಸದ್ಗತಿಗಾಗಿ ಮತ್ತು ಅವರ ಕುಟುಂಬಕ್ಕೆ ದುಃಖ, ಕಷ್ಟ ಸಹಿಸುವ ಶಕ್ತಿ ಕೊಡಲಿ. ಇನ್ನಾವ ಜೀವವೂ ಕೊರೋನಾ ರೋಗಕ್ಕೆ ಬಲಿಯಾಗದಿರಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ವಿಟ್ಲ ಸಮಾಜೋತ್ಸವ ಸಮಿತಿ ಅಧ್ಯಕ್ಷ ಎಂ.ಹರೀಶ್ ನಾಯಕ್ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು. ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ನೋಡಲು ಸಾವಿರಾರು ಮಂದಿ ವಿಟ್ಲದಲ್ಲಿ ನೆರೆದಿದ್ದರು.