ಉಳ್ಳಾಲ, ಮಾರ್ಚ್ 15 (DaijiworldNews/SM): ಕೊರೋನ ವೈರಸ್ನಂತಹ ಮಾರಕ ರೋಗದಿಂದ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಯಾಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಸಿಬ್ಬಂದಿಗಳು ಮತ್ತು ಜನಪ್ರತಿನಿಧಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಬೇಕು. ಪ್ರತೀ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಪರೀಕ್ಷಾ ಕಿಟ್ ಮತ್ತು ವೈದ್ಯರಿಗೆ ದಾದಿಯರಿಗೆ ಸೇಫ್ಟಿ ಗೌನ್, ಜಿಲ್ಲೆಯಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ಮತ್ತು ಪ್ರತ್ಯೇಕ ಐಸೋಲೇಟ್ ವಾರ್ಡ್ ನಿರ್ಮಾಣ ಮಾಡಬೇಕು ಎಂದು ಶಾಸಕ ಯು.ಟಿ.ಖಾದರ್ ಸರಕಾರವನ್ನು ಆಗ್ರಹಿಸಿದ್ದಾರೆ.
ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೋನಾ ವೈರಸ್ ಬಗ್ಗೆ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯಸ್ಥರು, ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಗಳು ಮತ್ತು ಸ್ಥಳಿಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಭಾನುವಾರ ನಡೆದ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ, ಅವರು ರಾಜ್ಯದಲ್ಲಿ ಕೊರೊನಾ ವೈರಸ್ನಿಂದ ಉಂಟಾಗುವ ಸಮಸ್ಯೆಯನ್ನು ಎದುರಿಸಲು ಪ್ರತೀ ಆರೋಗ್ಯ ಕೇಂದ್ರಗಳು ಸನ್ನದ್ಧವಾಗಿರಬೇಕು ಮುಖ್ಯವಾಗಿ ತಪಾಸಣೆಗೆ ಬರುವ ರೋಗಿಗನ್ನು ಪರೀಕ್ಷಿಸಲು ಕೊರೊನಾ ವೈರಸ್ ಪರೀಕ್ಷೆಯ ಕಿಟ್ ಪ್ರತೀ ಆರೋಗ್ಯ ಕೇಂದ್ರದಲ್ಲಿ ಇರಿಸುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದ್ದು ಎರಡು ದಿನಗಳಲಲ್ಲಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷಾ ಕಿಟ್ ಲಭ್ಯವಾಗಲಿದೆ. ಜನರು ಕೊರೊನಾ ವೈರಸ್ ಕುರಿತಂತೆ ಭಯ ಆತಂಕ ಪಡುವುದು ಬೇಡ ಆದರೆ ಜಾಗೃತಿ ವಹಿಸುವುದರೊಂದಿಗೆ ಆರೋಗ್ಯ ಸಿಬ್ಬಂದಿಗಳು ಚುನಾಯಿತ ಜನಪ್ರತಿನಿಧಿಗಳು ಪ್ರತೀ ಮನೆ ಮನೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಇದರೊಂದಿಗೆ ಯಾರಾದರೂ ತಮ್ಮ ನೆರೆಕೆರೆಯಲ್ಲಿ ಅನಾರೋಗ್ಯದ ಸ್ಥಿತಿ ಕಂಡು ಬಂದರೆ ಆರೋಗ್ಯ ತಪಾಸಣೆ ಮಾಡುವ ಕಾರ್ಯ ಮಾಡಬೇಕು ಎಂದರು.
ಪ್ರತ್ಯೇಕ ಐಸೋಲೇಟ್ ವಾರ್ಡ್ ಅಗತ್ಯ : ಜಿಲ್ಲಾ ಸರಕಾರಿ ಆಸ್ಪತ್ರೆ ಅಥವಾ ಮಾನ್ಯತೆ ಹೊಂದಿರುವ ಖಾಸಗಿ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ನ ಪರೀಕ್ಷಾ ಲ್ಯಾಬ್ ನಿರ್ಮಿಸಬೇಕು. ಇದರೊಂದಿಗೆ ವಾಮಂಜೂರು ಪ್ರದೇಶದ ಟಿ.ಬಿ. ಆಸ್ಪತ್ರೆಯಂತಹ ಪ್ರದೇಶಗಳಲ್ಲಿ ಪ್ರತ್ಯೇಕ ಐಸೋಲೇಟ್ ವಾರ್ಡ್ ಸ್ಥಾಪನೆ ಮಾಡಬೇಕು ಇಂತಹ ಕಾರ್ಯಕ್ಕೆ ಕಾರ್ಪೋರೇಟ್ ಸಂಸ್ಥೆಗಳು ಆರ್ಥಿಕ ಸಹಾಯ ನೀಡಲು ಮುಂದೆ ಬರುತ್ತದೆ ಎಂದ ಅವರು ಮುಂದಿನ ಒಂದು ವಾರದಲ್ಲಿ ರಾಜ್ಯದಲ್ಲಿ ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ಸಂಪೂರ್ಣ ಚಿತ್ರಣ ಸಿಗುವ ಸಾಧ್ಯತೆಯಿದ್ದು, ಆಯುಷ್ಮಾನ್ ಯೋಜನೆ ಕೊರೊನಾ ವೈರಸ್ನಿಂದ ಸೋಂಕಿತರಾದವರಿಗೂ ಚಿಕಿತ್ಸೆಯ ವೆಚ್ಚ ಬರಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.
ವೈದ್ಯರ ಮತ್ತು ಸಿಬ್ಬಂದಿಗಳ ರಕ್ಷಣೆ ಮುಖ್ಯ : ಆಸ್ಪತ್ರೆಗಳಲ್ಲಿ ಕೊರೊನ ವೈರಸ್ಗೆ ಚಿಕಿತ್ಸೆ ನೀಡುವ ವೈದ್ಯರ, ದಾದಿಯರ ಮತ್ತು ಇತರ ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆ ಅತೀ ಅಗತ್ಯ. ಈ ನಿಟ್ಟಿನಲ್ಲಿ ಸುರಕ್ಷಾ ಗೌನ್ ವಿತರಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿರುವ ಅವರು ಉಳ್ಳಾಲದಂತಹ ನಗರ ಕೇಂದ್ರಿತ ಆರೋಗ್ಯ ಕೇಂದ್ರಗಳಲ್ಲಿ ೧೦ರಷ್ಟು ಮತ್ತು ಇತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕನಿಷ್ಟ ಮೂರು ಸುರಕ್ಷಾ ಗೌನ್ ನೀಡುವ ಕಾರ್ಯ ಸಂಬಂಧ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು.
ದೊಡ್ಡ ಸಮಾರಂಭಗಳಲ್ಲಿ ಭಾಗವಹಿಸಬೇಡಿ : ಜನರಲ್ಲಿ ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದ್ದು, ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಕೆಲ ದಿನಗಳ ಕಾಲ ಭಾಗವಹಿಸಬೇಡಿ, ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಜನರು ಹೆಚ್ಚು ಸೇರದೆ ಮನೆಯಲ್ಲೇ ಪ್ರಾರ್ಥನೆ ನೆರವೇರಿಸಿ. ಪ್ರವಾಸೋಧ್ಯಮ ಕೇಂದ್ರಗಳಲ್ಲಿ ಜನರು ಹೆಚ್ಚು ಬರಂದಂತೆ ಸಂಬಂಧ ಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ಪ್ರಾಥಮಿಕಾರೋಗ್ಯ ಕೇಂದ್ರದ ಆರೋಗ್ಯಾಽಕಾರಿಗಳು ಮತ್ತು ಜನಪ್ರತಿನಿಽಗಳು ತಮ್ಮ ಸಲಹೆಗಳನ್ನೂ ಸೂಚಿಸಿದರು. ಜಿಲ್ಲಾ ಆರೋಗ್ಯ ಅಽಕಾರಿ ಡಾ| ರಾಜೇಶ್ ,ತಾಲೂಕು ಆರೋಗ್ಯ ಅಧಿಕಾರಿ ಡಾ.ಸುಜಯ್ ಭಂಡಾರಿ, ಉಳ್ಳಾಲ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಶಾಂತ್ ಅಮೀನ್, ಕೋಟೆಕಾರು ಆರ್ಯೋಗ್ಯ ಕೇಂದ್ರದ ಡಾ.ಗೋಪಿ ಪ್ರಕಾಶ್, ಅಂಬ್ಲಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುದೇಶ್ ಮತ್ತಿತರರು ಉಪಸ್ಥಿತರಿದ್ದರು.