ಬಂಟ್ವಾಳ, ಫೆ 19: ಇಲ್ಲಿನ ವ್ಯಕ್ತಿಯೊಬ್ಬರು ವಿಕಲಾಂಗ ಯುವತಿಯೊಬ್ಬಳಿಗೆ ತಾಳಿ ಕಟ್ಟಿ ಆಕೆಗೆ ಬಾಳು ನೀಡುವ ಮೂಲಕ ಅದರ್ಶ ಮೆರೆದಿದ್ದಾರೆ.
ಈ ಮದುವೆ ನಡೆದದ್ದು ಕಲ್ಲಡ್ಕ ಶ್ರೀ ರಾಮ ಭಜನಾ ಮಂದಿರದಲ್ಲಿ. ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ಉಪ್ಪಳ ಬೆರಿಪದವು ಬಳ್ಳೂರು ನಿವಾಸಿ ದಿ. ನಾರಾಯಣ ಶೆಟ್ಟಿಗಾರ ಅವರ ಪುತ್ರ ಜಗನ್ನಾಥ ಎಂಬವರು ಇಂದು ಕಶೆಕೋಡಿ ಸೂರ್ಯ ಭಟ್ ಅವರ ಪರಿವಾರದವರ ಪೌರೋಹಿತ್ಯ ದಲ್ಲಿ 7.30 ರ ಶುಭ ಮೂಹೂರ್ತದಲ್ಲಿ ಕಲ್ಲಡ್ಕ ಶ್ರೀ ರಾಮ ಭಜನಾ ಮಂದಿರದ ಲ್ಲಿ ಬೆಳ್ತಂಗಡಿ ತಾಲೂಕಿನ ಸೋನಂದರು ಗ್ರಾಮದ ಪಣಕಜೆ ದಿ. ಕೃಷ್ಣಪ್ಪ ಪೂಜಾರಿಯವರ ಪುತ್ರಿ ರೇಖಾ ಅವರಿಗೆ ತಾಳಿ ಕಟ್ಟಿ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ.
ಜಗನ್ನಾಥ ಅವರ ತಂಗಿ ನಳಿನಿ ಒಂದು ಕಾಲು ಗಿಡ್ಡದಾಗಿ ವಿಕಲಾಂಗೆಯಾಗಿದ್ದರು. ಅವರಿಗೆ ಕಳೆದ ವರ್ಷ ಪಕ್ಷಿ ಕೆರೆಯ ದೇವರಾಜ ಎನ್ನುವ ಯುವಕನ್ನು ಹುಡುಕಿ ಮದುವೆ ಮಾಡಿದ್ದರು. ತನ್ನ ವಿಕಲಾಂಗ ತಂಗಿಯನ್ನು ಮದುವೆಯಾಗಿ ಅವಳಿಗೆ ಬಾಳು ನೀಡಿದ ಸಂದರ್ಭದಲ್ಲಿ ತಾನೂ ಇಂತಹ ವಿಕಲಾಂಗ ಹೆಣ್ಣಿಗೆ ಬಾಳು ನೀಡಬೇಕು ಎಂದು ಜಗನ್ನಾಥ ಇದೇ ವೇಳೆ ಸಂಕಲ್ಪ ಮಾಡಿದ್ದರು.
ನಂತರದ ದಿನಗಳಲ್ಲಿ ಇಂತಹ ಹುಡುಗಿಗೆ ಹುಡುಕಾಟ ಆರಂಬಿಸಿದ್ದು, ಸ್ವ ಜಾತಿಯಲ್ಲಿ ಇಂತಹ ಹೆಣ್ಣು ಸಿಗದೆ ಇದ್ದಾಗ ಅಂತರ್ಜಾತಿ ವಿವಾಹದ ಯೋಚನೆ ಮಾಡಿ ಅದರಲ್ಲಿ ಸಫಲರಾದರು. ಬೆಳ್ತಂಗಡಿಯ ರೇಖಾ ಅವರನ್ನು ವರಿಸಿ ಅವರ ಮನಸ್ಸಿನ ಅಸೆ ಮತ್ತು ಚಿಂತನೆಗೆ ಬೆಳಕು ಚೆಲ್ಲುವ ಮೂಲಕ ಸಮಾಜದಲ್ಲಿ ಅದರ್ಶ ವ್ಯಕ್ತಿಯಾಗಿದ್ದಾರೆ.
ಕಲ್ಲಡ್ಕ ಡಾ! ಪ್ರಭಾಕರ ಭಟ್ ಅವರು ಈ ಮದುವೆಗೆ ಸಾಕ್ಷಿಯಾಗಿದ್ದು, ಶುಭಾಶಯ ಕೋರಿದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹಾಗೂ ಹಿರಿಯರು ಉಪಸ್ಥಿತರಿದ್ದು ನವ ಜೋಡಿಗೆ ಶುಭ ಹಾರೈಸಿದರು.