ಮೂಡುಬಿದಿರೆ, ಮಾ.16 (DaijiworldNews/PY) : ಇರುವೈಲು ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಹೊಸಮರಾಯ ದೈವದ ಕೋಲ ನಡೆಯುತ್ತಿದ್ದ ಸಂದರ್ಭ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದ್ದು, 16 ಮಂದಿಯ ವಿರುದ್ದ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲವರಿಗೆ ತಂಡವೊಂದು ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಅದೇ ತಂಡ ವಾಹನವನ್ನು ಅಡ್ಡಗಟ್ಟಿ ಮತ್ತೊಮ್ಮೆ ಹಲ್ಲೆ ನಡೆಸಿದೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಭಕ್ತರ ಒಂದು ಗುಂಪು ಭಾನುವಾರ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದಾರೆ.
ಮಾ.9ರಂದು ದರ್ಶನ ಪಾತ್ರಿಯೊಂದಿಗೆ ಬಲಿ ನಡೆಯುತ್ತಿದ್ದ ಸಂದರ್ಭ ವಿವಾದವೊಂದಕ್ಕೆ ಸಂಬಂಧಿಸಿ ಪೊಲೀಸರು ಬಲಿಯನ್ನು ನಿಲ್ಲಿಸಿದ್ದು, ಇದರಿಂದ ಕ್ಷೇತ್ರ ಹಾಗೂ ಭಕ್ತರ ನಂಬಿಕೆಗೆ ಚ್ಯುತಿಯಾಗಿದೆ. ಕಳೆದ ವರ್ಷದಿಂದ ಒಂದು ತಂಡದವರು ಕಾರ್ಯಕ್ರಮವನ್ನು ವಿರೋಧಿಸುತ್ತಾ ಬರುತ್ತಿದ್ಧಾರೆ. ಆಡಳಿತಾಧಿಕಾರಿ ಹಾಗೂ ಪೊಲೀಸರು ಏಕಪಕ್ಷೀಯವಾಗಿ ವರ್ತಿಸಿಕೊಂಡಿದ್ಧಾರೆಂದು ಪ್ರತಿಭಟನಾಕಾರರು ಆರೋಪಿಸಿ ಧಿಕ್ಕಾರ ಕೂಗಿದರು.
ಪಣಂಬೂರು ವಿಭಾಗ ಎಸಿಪಿ ಕೆ.ಯು.ಬೆಳಿಯಪ್ಪ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. ದೈವದ ಪಾತ್ರಿ ವಿವಾದವು ಧಾರ್ಮಿಕ ವಿಷಯವಾಗಿರುವುದರಿಂದ ಊರವರ ಜೊತೆ ಮಾತುಕತೆ ನಡೆಸಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಎಸಿಪಿ ಧರಣಿ ನಡೆಸುತ್ತಿದ್ದವರಿಗೆ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಧರಣಿ ನಿರತರ ಪರವಾಗಿ ಪ್ರಸಾದ್ ಶೆಟ್ಟಿ ಅವರು ಎಸಿಪಿ ಅವರಿಗೆ ಘಟನೆ ಕುರಿತಾಗಿ ಮಾಹಿತಿ ನೀಡಿದರು.
ತಂಡವೊಂದು ದೈವದ ಪಾತ್ರಿ ವಿಚಾರದಲ್ಲಿ ವಿರೋಧಿಸುತ್ತಾ ಬಂದಿದೆ. ಶನಿವಾರ ಹೊಸಮರಾಯ ದೈವದ ಕೋಲ ಆರಂಭವಾಗುವ ಸಂದರ್ಭ ತಂಡವೊಂದು ಪಾತ್ರಿಯನ್ನು ನಿಂದಿಸಿದ್ದರಿಂದ ವಿವಾದ ಉಂಟಾಗಿತ್ತು. ಇದನ್ನು ಆಕ್ಷೇಪಿಸಿದವರಿಗೆ ಆ ತಂಡ ಹಲ್ಲೆ ನಡೆಸಿತ್ತು. ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ ಅದೇ ತಂಡ ಮಾಸ್ತಿಕಟ್ಟೆಯಲ್ಲಿ ವಾಹನವನ್ನು ತಡೆದು ಹಲ್ಲೆ ನಡೆಸಿದೆ. ಅಲ್ಲದೇ, ನಮ್ಮ ಕಡೆಯೂ ಕೆಲವರ ವಿರುದ್ದ ಸುಳ್ಳು ಕೇಸು ದಾಖಲಿಸಲಾಗಿದೆ. ರಾಜಕೀಯ ಒತ್ತಡ ಮತ್ತು ಪೊಲೀಸರ ಹಸ್ತಕ್ಷೇಪದಿಂದ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗು ತೊಂದರೆಯಾಗಿದೆ ಎಂದು ಧರಣಿ ನಿರತರು ಆರೋಪಿಸಿದ್ದಾರೆ.
ಇನ್ನೊಂದು ತಂಡವು, ಪೊಲೀಸರು ಹಾಗೂ ಆಡಳಿತಾಧಿಕಾರಿಗಳ ಸರಿಯಾಗಿದೆ ಎಂದು ಅಧಿಕಾರಿಗಳಿಗೆ ಪೊಲೀಸ್ ಠಾಣೆ ಮುಂಭಾಗದಲ್ಲೇ ಜೈಕಾರ ಕೂಗಿದ್ದಾರೆ.
ದೇವಸ್ಥಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಬೇಸತ್ತಿದ್ದೇವೆ. ಕಳೆದ ಅವಧಿಯಲ್ಲಿ ವ್ಯವಸ್ಥಾಪನ ಸಮಿತಿಯವರು ಯಾವುದೇ ಸಾರ್ವಜನಿಕ ಸಭೆ ಕರೆಯದೇ ಕಾರ್ಯಕ್ರಮಗಳನ್ನು ತಮ್ಮ ಇಚ್ಛೆಯಂತೆ ನಡೆಸುತ್ತಿದ್ದಾರೆ. ಊರಿನ ಭಕ್ತರ ಅಭಿಪ್ರಾಯಕ್ಕೆ ಬೆಲೆ ಕೊಡುತ್ತಿಲ್ಲ. ಸರ್ಕಾರದ ಹಣ ದುರ್ಬಳಕೆ ಮಾಡುತ್ತಿದ್ಧಾರೆ. ಕಳೆದ ವರ್ಷ ಅನ್ಯಾಯ ಮಾಡಿ ಹೋಗಿರುವ ದೈವದ ಪಾತ್ರಿಯನ್ನೇ ಮತ್ತೆ ಕರೆತಂದು ಕರ್ತವ್ಯ ನಿರ್ವಹಿಸಲು ಪ್ರೇರೆಪಿಸಿದ್ಧಾರೆ ಎಂದು ಈ ತಂಡ ಆರೋಪಿಸಿದೆ. ಅಲ್ಲದೇ, ಅಷ್ಟಮಂಗಲ ಪ್ರಶ್ನೆಯನ್ನು ಇಡದೇ ಆತನನ್ನೇ ಮರು ನೇಮಕ ಮಾಡಿರುವುದು ಯಾಕೆ. ದೈವ ಒಪ್ಪಿದರೆ ಆತನನ್ನೆ ಮುಂದುವರಿಸುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ಅವಸರ ಯಾಕೆ. ಸರ್ಕಾರದ ಆದೇಶವನ್ನು ಲೆಕ್ಕಿಸದೇ ಕೋಲವನ್ನು ಮಾಡಿರುವ ಬಗ್ಗೆ ತನಿಖೆ ನಡೆಸಬೇಕೆಂದು ಮನವಿಯಲ್ಲಿ ವಿನಂತಿಸಿದ್ಧಾರೆ.