ನವದೆಹಲಿ, ಫೆ 20: ಕರಾವಳಿಯ ಸಾಂಪ್ರದಾಯಿಕ ಮತ್ತು ವೀರ ಕ್ರೀಡೆ ಕಂಬಳಕ್ಕೆ ಹಸಿರು ನಿಶಾನೆ ದೊರೆತಿದ್ದು, ಕಂಬಳ ತಿದ್ದುಪಡಿ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ.
ಜಾನಪದ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿದೆ. ರಾಜ್ಯಪಾಲ ವಜುಭಾಯಿ ವಾಲಾ ಕಳಿಸಿದ್ದ ತಿದ್ದುಪಡಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಮಾಡಿದ್ದು, ಕಂಬಳಕ್ಕೆ ಇದ್ದ ಅಡ್ಡಿ ದೂರವಾಗಿದೆ.
ಪೇಟಾ ಸಂಸ್ಥೆಯು ಪ್ರಾಣಿ ಹಿಂಸೆ ಕಾರಣವೊಡ್ಡಿ ಕಂಬಳಕ್ಕೆ ತಡೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಸರ್ವೋಚ್ಚ ನ್ಯಾಯಾಲಯವು ಪೇಟಾ ವಾದವನ್ನು ಪುರಸ್ಕರಿಸಿ, ಕಂಬಳಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು. ಇದೀಗ ರಾಷ್ಟ್ರಪತಿಗಳು ಕಂಬಳದ ಮಸೂದೆಗೆ ಅಂಕಿತ ಹಾಕಿದ್ದಾರೆ.
ಕಂಬಳ ಸೇರಿದಂತೆ ಕೆಲ ಜಾನಪದ ಕ್ರೀಡೆಗಳನ್ನು ಸರ್ವೋಚ್ಚ ನ್ಯಾಯಾಲಯ ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ, ರಾಜ್ಯ ಸರಕಾರವು ಕಂಬಳ ಕ್ರೀಡೆಯ ಪರ ಸುಗ್ರೀವಾಜ್ಞೆ ಹೊರಡಿಸಿತ್ತು. ಕಂಬಳದ ಮಸೂದೆಗೆ ತಿದ್ದುಪಡಿ ತಂದು ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಲಾಯಿತು. ಅದಾದ ಬಳಿಕ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರ ಗಮನಕ್ಕೆ ತರಲಾಯಿತು. ರಾಜ್ಯಪಾಲರು ಅದನ್ನು ರಾಷ್ಟ್ರಪತಿ ಅಂಗಳಕ್ಕೆ ಕಳುಹಿಸಿದ್ದರು. ಏಳು ತಿಂಗಳ ಬಳಿಕ ರಾಷ್ಟ್ರಪತಿಗಳು ಕಂಬಳಕ್ಕೆ ಜೈ ಅಂದಿದ್ದಾರೆ.
ಕೊನೆಗೂ ಕಂಬಳ ಮಸೂದೆಗೆ ರಾಜ್ಯ ಸರಕಾರ ಮಾಡಿದ ತಿದ್ದುಪಡಿಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಹಸಿರು ನಿಶಾನೆ ತೋರಿದ್ದು, ಇದರಿಂದ ತುಳುವರ ಖುಷಿ ಇಮ್ಮಡಿಯಾಗಿದೆ.