ಕಾಸರಗೋಡು, ಮಾ 16 (DaijiworldNews/SM): ಕೊರೋನಾಗೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ 325 ಮಂದಿಗೆ ನಿಗಾ ಇರಿಸಲಾಗಿದ್ದು ಈ ಪೈಕಿ ನಾಲ್ಕು ಮಂದಿಯನ್ನು ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗಿದೆ. ಇಂದು ಯಾವುದೇ ಪಾಸಿಟಿವ್ ವರದಿ ಬಂದಿಲ್ಲ.
ವಿದೇಶದಿಂದ ಬಂದ ಇಬ್ಬರ ಬಗ್ಗೆ ವಿಶೇಷ ನಿಗಾ ಇರಿಸಲಾಗಿದೆ. ಈ ಪೈಕಿ ಓರ್ವ ಬ್ರೆಜಿಲ್ ನಿಂದ ಬಂದವರಾಗಿದ್ದು ಜಿಲ್ಲಾಸ್ಪತ್ರೆಯ ಐಸೋಲೇಶನ್ ವಾರ್ಡಿಗೆ ದಾಖಲಿಸಲಾಗಿದೆ. ಉಳಿದವರು ಆಯಾ ಮನೆಗಳಲ್ಲಿ ನಿಗಾದಲ್ಲಿದ್ದಾರೆ.
ಗಡಿ ಪ್ರದೇಶದಲ್ಲಿ ತೀವ್ರಗೊಂಡ ತಪಾಸಣೆ:
ಇನ್ನು ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಗಡಿಯಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಗಡಿ ಪ್ರದೇಶವಾದ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಆರೋಗ್ಯ ಇಲಾಖೆ ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದಾರೆ. ಕರ್ನಾಟಕದಿಂದ ಹಾಗೂ ಇತರ ರಾಜ್ಯಗಳಿಂದ ಬರುವ ವಾಹನಗಳನ್ನು ತಪಾಸಣೆ ಬಳಿಕವಷ್ಟೇ ಕೇರಳಕ್ಕೆ ಬಿಡಲಾಗುತ್ತಿದೆ. ಪ್ರಮುಖ ಗಡಿ ಪ್ರದೇಶವಾದ ತಲಪಾಡಿ, ಪೆರ್ಲ, ಪಾಣತ್ತೂರು ಮೊದಲಾದೆಡೆಗಳಲ್ಲಿ ಆರೋಗ್ಯ ಇಲಾಖೆ ಸಿಬಂದಿಗಳು, ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ರೈಲ್ವೇ ನಿಲ್ದಾಣದಲ್ಲೂ ತಪಾಸಣಾ ಕೇಂದ್ರ:
ಇದಲ್ಲದೆ ರೈಲ್ವೆ ನಿಲ್ದಾಣಗಳಲ್ಲಿ ಹೆಲ್ಪ್ ಡೆಸ್ಕ್ ಗಳನ್ನು ಆರಂಭಿಸಲಾಗಿದೆ. ಮಂಜೇಶ್ವರ, ಕುಂಬಳೆ, ಕಾಸರಗೋಡು, ನೀಲೇಶ್ವರ, ಚೆರ್ವತ್ತೂರು ರೈಲ್ವೆ ನಿಲ್ದಾಣಗಳಲ್ಲಿ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದೆ. ಇದಲ್ಲದೆ ಕಾಸರಗೋಡು ರೈಲು ನಿಲ್ದಾಣದಲ್ಲಿ ರೈಲ್ವೇ ತಪಾಸಣೆಗೆ 5 ತಂಡಗಳನ್ನು ಸಜ್ಜುಗೊಳಿಸಲಾಗಿದೆ.
ವಿದೇಶದಿಂದ ಬರುವವರ ಮೇಲೆ ನಿಗಾ:
ಇನ್ನು ವಿದೇಶದಿಂದ ಬಂದವರು ಜಿಲ್ಲಾ ಕೊರೋನಾ ಕಂಟ್ರೋಲ್ ರೂಂ ಅಥವಾ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಲ್ಲದೆ ಕುಟುಂಬ ಸಲಹಾ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರ, ಸರಕಾರಿ ಆಸ್ಪತ್ರೆ ಮೊದಲಾದೆಡೆಗಳಲ್ಲಿ ಸಂಪರ್ಕಿಸಿ ವರದಿ ನೀಡಬೇಕು. ಜನರಲ್ಲಿ ಉಂಟಾಗಿರುವ ಆತಂಕವನ್ನು ಕಡಿಮೆಗೊಳಿಸಲು ಜನಜಾಗೃತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಭಯಪಡುವ ಯಾವುದೇ ಸ್ಥಿತಿ ಸದ್ಯಕ್ಕಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ರಾಮದಾಸ್ ತಿಳಿಸಿದ್ದಾರೆ.
ಕೊರೋನಾ ಪೀಡಿತ ಪ್ರದೇಶಗಳಿಂದ ಹಾಗೂ ಇತರ ಕಡೆಗಳಿಂದ ಬರುವವರು ಜಿಲ್ಲಾ ಕೊರೋನಾ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು. ರೋಗಹರಡದಂತೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಹಲವು ವ್ಯವಸ್ಥೆಗಳನ್ನು ಮಾಡಲಾಗಿದ್ದು ರೋಗ ಲಕ್ಷಣ ಹೊಂದಿರುವರು ಕೂಡಲೇ ಸಮೀಪದ ಆಸ್ಪತ್ರೆ, ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿ ತಪಾಸಣೆ ನಡೆಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.