ಮಂಗಳೂರು, ಮಾ 16 (DaijiworldNews/SM): ದ.ಕ. ಜಿಲ್ಲೆ ಸೇರಿದಂತೆ ರಾಜ್ಯ ಕೊರೊನಾ ಭೀತಿಯಲ್ಲಿದೆ. ಆದರೆ, ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿರದ ಹಿನ್ನೆಲೆ ಜನ ಭಯಪಡುವ ಅಗತ್ಯತೆ ಇಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮಗಳನ್ನು ಅಗತ್ಯವಾಗಿ ಕೈಗೊಳ್ಳಬೇಕಾಗಿದೆ. ಈ ಹಿನ್ನೆಲೆ ಈಗಾಗಲೇ ಆದೇಶ ನೀಡಿದಂತೆ ಮಂಗಳೂರು ನಗರದಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಬ್ರೇಕ್ ಹಾಕಲಾಗಿದೆ.
ಬೀದಿ ಬದಿಯಲ್ಲಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡದಂತೆ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಹೆಗ್ಡೆ ಈಗಾಗಲೇ ಆದೇಶ ನೀಡಿದ್ದಾರೆ. ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ತಪ್ಪಿದ್ದಲ್ಲಿ ಮಾರ್ಚ್ 16ರ ಸೋಮವಾರ ತೆರವುಗೊಳಿಸಲಾಗುವುದೆಂದು ತಿಳಿಸಿದ್ದರು. ಅದರಂತೆ ಆದೇಶ ಮೀರಿ ಕಾರ್ಯಾಚರಿಸುತ್ತಿದ್ದ ಬೀದಿ ಬದಿ ತಿಂಡಿ ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸಲಾಗಿದ್ದು, ಅಧಿಕಾರಿಗಳು ದಾಳಿ ನಡೆಸಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಇನ್ನು ಎಲ್ಲೆಡೆ ಕೊರೊನಾ ಭೀತಿ ಇರುವ ಹಿನ್ನೆಲೆಯಲ್ಲಿ ಪಾಲಿಕೆ ಮುನ್ನೆಚ್ಚರಿಕಾ ಕ್ರಮವನ್ನಷ್ಟೇ ಕೈಗೊಂಡಿದೆ. ಇದರಿಂದಾಗಿ ವ್ಯಾಪಾರಿಗಳಿಗೆ ಕೆಲವು ದಿನಗಳ ಕಾಲ ತೊಂದರೆಯಾಗಬಹುದು. ಆದರೆ, ವೈರಸ್ ಭೀತಿ ಕಡಿಮೆಯಾದ ಬಳಿಕ ತಮ್ಮ ವ್ಯಾಪಾರ ಮುಂದುವರೆಸಲು ಅವಕಾಶಗಳಿವೆ. ಈ ನಿಟ್ಟಿನಲ್ಲಿ ವ್ಯಾಪಾರಿಗಳು ಹಾಗೂ ಜನಸಾಮಾನ್ಯರು ಪಾಲಿಕೆ ಆದೇಶ ಪಾಲಿಸುವ ಅಗತ್ಯತೆ ಇದೆ.