ಕಾಪು, ಮಾ.17 (Daijiworld News/MB) : ಕಾಪು ಹಾಗೂ ಶಿರ್ವ ಠಾಣಾ ವ್ಯಾಪ್ತಿಯ ವಿವಿಧ ಬಾರ್ಗಳ ಬೀಗ ಮುರಿದು ಕಳವು ಮಾಡಿದ್ದ ಆರೋಪದಲ್ಲಿ ನಾಲ್ವರನ್ನು ಕಾಪು ಪೊಲೀಸರು ಮಾ.15 ರಂದು ಬಂಧಿಸಿದ್ದಾರೆ. ಪ್ರಸ್ತುತ ಶಿರ್ವ ಬಂಗ್ಲೆ ಗುಡ್ಡೆಯ ಬಾಡಿಗೆ ಮನೆಯಲ್ಲಿ ವಾಸವಿರುವ ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹೆಜ್ಜೆರಿ ನಿವಾಸಿ ರಮೇಶ್ ವಡ್ಡೇರ್ (30), ಬಾಗಲಕೋಟೆ ಜಿಲ್ಲೆ ಬಿಲ್ಕನೂರಿನ ವಿಜಯ ಹುಲಗಪ್ಪ ವಡ್ಡರ್ (30), ಶಿವಮೊಗ್ಗ ಜಿಲ್ಲೆ ಶೃಂಗೇರಿ ಮಕ್ಕಿಮನೆಯ ರವಿ (33), ಹಾಗೂ ಚಿತ್ರದುರ್ಗದ ಜಗಳೂರು ನಿವಾಸಿ ಗೋವಾ ಮೂಲದ ನೂರ್ ಮೊಹಮ್ಮದ್ ಶೇಖ್ (45) ಬಂಧಿತರು.
ಬಂಧಿತರಿಂದ ಮಾರುತಿ 800 ಕಾರು, ಮೋಟಾರ್ ಬೈಕ್, 4 ಮೊಬೈಲ್ ಫೋನ್ಗಳು, 1,983 ರೂ ಮತ್ತು ಕಳವಿಗೆ ಬಳಸಿದ್ದ ವಿವಿಧ ವಸ್ತುಗಳು ಸಹಿತ ಒಟ್ಟು 82,983 ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಭಾನುವಾರ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಅವರಿಗೆ ನ್ಯಾಯಾಲಯ ಮಾ.27 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತರ ವಿರುದ್ಧ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ ಹಾಗೂ ಗೋವಾದಲ್ಲಿ ಹಲವು ಕಳವು ಪ್ರಕರಣಗಳು ದಾಖಲಾಗಿವೆ.
ಆರೋಪಿಗಳು ಹಗಲಲ್ಲಿ ಶಿರ್ವ ಪರಿಸರದ ಕಲ್ಲುಕೋರೆಯಲ್ಲಿ ಕೆಲಸ ಮಾಡುತ್ತಿದ್ದು ರಾತ್ರಿಯಲ್ಲಿ ಬಾರ್, ಮೊಬೈಲ್ ಶಾಪ್ ಹಾಗೂ ಮನೆಗಳಲ್ಲಿ ಕಳವು ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಮಾರ್ಚ್ 15 ರಂದು ಕಡಪಾಡಿ ಜಂಕ್ಷನ್ನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಮಾರುತಿ 800 ಕಾರನ್ನು ಕಾಪು ಪೊಲೀಸರು ತಡೆದು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಕಾರನ್ನು ಪರಿಶೀಲನೆ ನಡೆಸಿದಾಗ 2 ರಾಡ್ಗಳು ಪತ್ತೆಯಾಗಿದ್ದು ಈ ಕಾರಣದಿಂದಾಗಿ ಆರೋಪಿಗಳ ವಿಚಾರಣೆ ನಡೆಸಿದಾಗ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ.
ಫೆ.4 ರಂದು ಮಧ್ಯರಾತ್ರಿ ಮಣಿಪುರ ದೆಂದೂರುಕಟ್ಟೆಯಲ್ಲಿ ಸಂತೋಷ್ ಶೆಟ್ಟಿ ಎಂಬವರ ಮನೋಜ್ ಬಾರ್ ಆಂಡ್ ರೆಸ್ಟೋರೆಂಟ್ನಿಂದ 10,000ರೂ. ಮತ್ತು ಡಿವಿಆರ್ ಅನ್ನು ಕಳವು ಮಾಡಿದ್ದರು. ಅದಾದ ಕಲೆವು ದಿನಗಳ ಬಳಿಕ ಕುರ್ಕಾಲಿನ ಶೆಟ್ಟಿ ಬಾರ್, ಬಂಟಕಲ್ಲು ಬಿಸಿರೋಡ್ನ ಆನ್ಯ ಬಾರ್ಗಳಿಂದಲ್ಲೂ ಕಳವು ಮಾಡಿದ್ದರು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರ ಪೈಕಿ ರವಿ ವಿರುದ್ಧ ಕಾವೂರು ಮತ್ತು ವೇಣೂರು ಠಾಣಾ ವ್ಯಾಪ್ತಿಯ ಮೊಬೈಲ್ ಅಂಗಡಿಗಳಲ್ಲಿ ಕಳವು ಮಾಡಿದ ಪ್ರಕರಣಗಳು ದಾಖಲಾಗಿದೆ. ರಮೇಶ್ ಬಡ್ಡೇರ್ ಶಿರ್ವ ಹಾಗೂ ಕಾಪುವಿನ ಬಾರ್ಗಳಿಂದ, ಗೋವಾ ಮತ್ತು ಅಂಕೋಲಾದ ದೇವಸ್ಥಾನಗಳಿಂದ, ವೇಣೂರಿನ ಮೊಬೈಲ್ ಅಂಗಡಿಯಿಂದ, ಮೂಡುಬಿದಿರೆಯ ಬಾರ್ ಹಾಗೂ ಮರು ಮನೆಗಳು ಸೇರಿದಂತೆ ಒಟ್ಟು 8 ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ನೂರ್ ಮೊಹಮ್ಮದ್ ಶೇಖ್ ಗೋವಾದಲ್ಲಿ 9, ಮೂಡುಬಿದಿರೆ ಠಾಣಾ ವ್ಯಾಪ್ತಿಯ ಬಾರ್ ಹಾಗೂ 3 ಮನೆಗಳು ಸಹಿತ 16 ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ವಿಜಯ ಹುಲಗಪ್ಪ ವಡ್ಡರ್ ಮೂಡುಬಿದಿರೆಯ ಬಾರ್ನಿಂದ, 3 ಮನೆಗಳಿಂದ ಹಾಗೂ ವೇಣೂರಿನ ಮೊಬೈಲ್ ಅಂಗಡಿ ಸಹಿತ 8 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾಪು ಸಿಐ ಮಹೇಶ್ ಪ್ರಸಾದ್, ಕಾಪು ಎಸ್ಐ ಯೂನುಸ್ ಗಡ್ಡೇಕರ್, ಅಪರಾಧ ಪತ್ತೆದಳದ ಸಿಬ್ಬಂದಿ ವರ್ಗದ ಪ್ರವೀಣ್ ಕುಮಾರ್, ರಾಜೇಶ್, ಸಂದೀಪ್, ರವಿ ಕುಮಾರ್, ಮಹಾಬಲ, ರಘು, ಶಿವ ಕುಮಾರ್,ಜಗದೀಶ್, ಆನಂದ್ ಮೊದಲಾದವರು ಭಾಗಿಯಾಗಿದ್ದರು.