ಮಂಗಳೂರು, ಮಾ.17 (Daijiworld News/MB) : ಮುಸ್ಲಿಂ ಮಹಿಳೆ ತನ್ನ ಹಿಂದೂ ನೆರೆಮನೆಯವರಿಗೆ ಸಮಯಕ್ಕೆ ಸರಿಯಾಗಿ ಸಹಾಯ ಮಾಡಿ ಮಾನವೀಯತೆ ಮೆರೆದ ಹೃದಯಸ್ಪರ್ಶಿ ಘಟನೆ ನಡೆದಿದೆ.
ಮಡೆಕೇರಿಯ ಫಾತಿಮಾ ಎಂಬ ಮಹಿಳೆ ತನ್ನ ನೆರೆಮನೆಯ 35 ವರ್ಷದ ರಾಜು ಎಂಬವರನ್ನು ಸಮಯಕ್ಕೆ ಸರಿಯಾಗಿ ಚಿಕಿತ್ಸೆಗೆಂದು ಅವರ ಹಣದಿಂದಲ್ಲೇ ಮಂಗಳೂರಿಗೆ ಕರೆದುಕೊಂಡು ಬಂದು ಪ್ರಾಣ ಉಳಿಸಿ ಮಾನವೀಯತೆ ಮರೆದಿದ್ದಾರೆ.
ಮಡಿಕೇರಿಯ ಸಿದ್ದಾಪುರದ ನೆಲ್ಯಾಹುದುಕೇರಿ ನಿವಾಸಿ ರಾಜು ಅವರಿಗೆ ಕಳೆದ 12 ವರ್ಷಗಳಿಂದ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ. ಹಾಗೆಯೇ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ಅವರ ಸ್ಥಿತಿ ಕಳೆದ 2 ದಿನಗಳಿಂದ ಗಂಭೀರವಾಗಿತ್ತು. ರಾಜು ಅವರನ್ನು ಅವರ 65 ವರ್ಷ ವಯಸ್ಸಿನ ತಾಯಿ ಲೀಲಮ್ಮ ನೋಡಿಕೊಳ್ಳುತ್ತಿದ್ದು ತರಕಾರಿ ಬೆಳೆಸುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.
ಅವರು ವಾಸವಿರುವ ಮನೆಯು ಕುಸಿದು ಬೀಳುವ ಪರಿಸ್ಥಿಯಲ್ಲಿದ್ದು ತೀವ್ರ ಹಣಕಾಸಿನ ತೊಂದರೆಯೊಂದಿಗೆ ಈ ಕುಟುಂಬ ದಿನದೂಡುತ್ತಿದೆ. ಮಗನ ಪರಿಸ್ಥಿತಿಯನ್ನು ನೋಡಿ ತಾಯಿ ದುಖಿಃತರಾಗಿರುವುದನ್ನು ಗಮನಿಸಿದ ನೆರೆಮನೆಯ ಮುಸ್ಲಿಂ ಮಹಿಳೆ ಫಾತಿಮಾ ರಾಜುರವರನ್ನು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು.
ಆದರೆ ರಾಜು ತಾಯಿಯ ಬಳಿ ಮಗನನ್ನು ಮಡಿಕೇರಿಯಿಂದ ಮಂಗಳೂರಿಗೆ ಕರೆದುಕೊಂಡು ಬರಲು ಆಂಬುಲೆನ್ಸ್ಗೆ ನೀಡಲು ಹಣವಿರಲಿಲ್ಲ. ಈ ಸಂದರ್ಭದಲ್ಲಿ ಕೂಡಲೇ ತನ್ನ ಮಗಳ ಆಭರಣವನ್ನು ಅಡವಿಟ್ಟು ಸಾಲ ಪಡೆದು ರಾಜು ತಾಯಿಯೊಂದಿಗೆ ರಾಜು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಬಂದವರು ಫಾತಿಮಾ.
ತನ್ನ ನೆರೆಮನೆಯ ರಾಜು ಅವರು ಗುಣಮುಖರಾಗಲು ಫಾತಿಮಾರವರು ಎಲ್ಲಾ ರೀತಿಯ ಸಹಾಯ ಮಾಡುತ್ತಿದ್ದಾರೆ. ರಾಜು ಅವರ ತಾಯಿಗೆ ನಡೆದಾಡಲು ಕಷ್ಟವಾಗಿದ್ದು ತನ್ನ ಮಗನನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಇಬ್ಬರನ್ನು ಫಾತಿಮಾರವರು ನೋಡಿಕೊಳ್ಳುತ್ತಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಎಸ್ಕೆಎಸ್ಎಸ್ಎಫ್ನ ದಕ್ಷಿಣ ಜಿಲ್ಲಾ ಉಪಾಧ್ಯಕ್ಷ ತಾಜುದ್ದೀನ್ ತಾರ್ಲಿ ತನ್ನ ನರೆಮನೆಯವರಿಗೆ ಫಾತಿಮಾ ಮಾಡಿದ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದ್ದಾರೆ.
ನಾವು ರಾಜು ಅವರನ್ನು ಭೇಟಿ ಮಾಡಿದೆವು. ಅವರನ್ನು ಐಸಿಯುವಿನಲ್ಲಿ ಇರಿಸುವ ಅಗತ್ಯವಿದೆ. ಆದರೆ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಲು ಐಸಿಯು ವ್ಯವಸ್ಥೆಯಿಲ್ಲ. ರಾಜುನನ್ನು ಬೇರೆ ಆಸ್ಪತ್ರೆಗೆ ಸಾಗಿಸುವುದಾಗಿ ವೈದ್ಯರು ಭರವಸೆ ನೀಡಿದ್ದಾರೆ. ಫಾತಿಮಾ ಅವರಂತಹ ಜನರಲ್ಲಿ ಮಾನವೀಯತೆಯ ಬಗ್ಗೆ ನಂಬಿಕೆ ಹುಟ್ಟಿಸುತ್ತಾರೆ" ಎಂದು ಹೇಳಿದರು.