ಮಂಗಳೂರು, ಮಾ.17 (Daijiworld News/MB): ದ.ಕ. ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಇಂದಿನಿಂದ ಎಲ್ಲಾ ಸೇವೆಗಳನ್ನು ರದ್ದುಗೊಳಿಸಲಾಗುವುದು. ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇರುತ್ತದೆ ಎಂದು ಜಿಲ್ಲಾಡಳಿತದ ನಿರ್ಧಾರವನ್ನು ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಘೋಷಿಸಿದ್ದಾರೆ.
ಕೊರೊನಾ ವೈರಸ್ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಅಧಿಕಾರಿಗಳ ಸಭೆ ನಡೆಯಿತು.
ಇಂದಿನಿಂದ ದೇವಸ್ಥಾನ, ದೈವಸ್ಥಾನ ಉತ್ಸವಗಳಲ್ಲಿ ಸಿಬ್ಬಂದಿ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ. ಎಲ್ಲಾ ಸೇವೆಗಳನ್ನು ರದ್ದು ಪಡಿಸಬೇಕು ಎಂದು ಸಭೆಯಲ್ಲಿ ತಿಳಿಸಿದ್ದಾರೆ.
ಕೊರೊನಾ ವೈರಸ್ ಬಗ್ಗೆ ಇಡೀ ದೇಶದಲ್ಲಿ ಭಯಾನಕ ವಾತಾವರಣ ಸೃಷ್ಟಿ ಆಗಿದೆ. ಕೇಂದ್ರ ರಾಜ್ಯ ಸರಕಾರ ಸವಾಲಾಗಿ ಸ್ವೀಕರಿಸಿ ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಬೇರೆ ದೇಶದಿಂದ ಬರುವವರನ್ನು ಪರೀಕ್ಷೆ ಮಾಡಲಾಗುತ್ತಿದೆ. ಈವರೆಗೆ 1 ಲಕ್ಷ 85 ಪರೀಕ್ಷೆ ಮಾಡಲಾಗಿದೆ. ಈ ಸೋಂಕಿನಿಂದಾಗಿ ದೇಶದಲ್ಲಿ ಇಬ್ಬರು ಮೃತ ಪಟ್ಟಿದ್ದಾರೆ. ಕರ್ನಾಟಕದಲ್ಲಿ 10 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಒಬ್ಬರು ಮೃತಪಟ್ಟಿದ್ದಾರೆ, ಮೃತರ ಕುಟುಂಬದ ಮತ್ತೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ ಶ್ರೀರಾಮುಲು ತಿಳಿಸಿದರು.
ಈ ಸಂದರ್ಭದಲ್ಲಿ ಬೀಚ್ಗಳಲ್ಲಿ ಜನ ಕಂಡಲ್ಲಿ ಕೂಡಲೇ ದಂಡ ಹಾಕಿಸಿ ಎಂದು ಶಾಸಕ ಯುಟಿ ಖಾದರ್ ಸಲಹೆ ನೀಡಿದ್ದು, ಅಪರ ಜಿಲ್ಲಾಧಿಕಾರಿ ಬೀಚ್ ಪ್ರವೇಶಕ್ಕೆ ನಿರ್ಬಂಧ ಹೇರಲಾಗುವುದು. ಹಾಗೆಯೇ ರೈಲ್ವೆ ನಿಲ್ದಾಣಗಳಲ್ಲಿ ಇಂದಿನಿಂದ ಥರ್ಮಲ್ ಸ್ಕ್ರೀನಿಂಗ್ ಆರಂಭ ಮಾಡಲಾಗುವುದು ಎಂದು ತಿಳಿಸಿದರು.
ಕೊರೊನಾ ವೈರಸ್ ಸೋಂಕು ಪತ್ತೆ ಹಚ್ಚಲು ಸಹಕಾರಿಯಾಗಲು ಮಂಗಳೂರಿನಲ್ಲಿ ಶೀಘ್ರವೇ ಟೆಸ್ಟಿಂಗ್ ಲ್ಯಾಬ್ ಆರಂಭ ಮಾಡಲಾಗುವುದು ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಸಭೆಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಜಿ.ಪಂ. ಸಿಇಒ ಸೆಲ್ವಮಣಿ ಮತ್ತಿತರರು ಉಪಸ್ಥಿತರಿದ್ದರು.