ಕುಂದಾಪುರ, ಫೆ 20: ಇಲ್ಲಿನ ಗರ್ಭಿಣಿ ಮಹಿಳೆಯ ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಶಾಂತ್ ಮೊಗವೀರನಿಗೆ ಕುಂದಾಪುರ ಜಿಲ್ಲಾ ಸತ್ರ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.
2015 ರ ಎಪ್ರಿಲ್ 11 ರಂದು ನೀರು ಕೇಳುವ ನೆಪದಲ್ಲಿ ಮನೆಗೆ ಬಂದ ಈತ ಮೂಡುಗೋಪಾಡಿಯ ಇಂದಿರಾ ಎಂಬ ಗರ್ಭಿಣಿ ಮಹಿಳೆಯ ಮೇಲೆ ಅಮಾನವೀಯವಾಗಿ ಅತ್ಯಾಚಾರ ನಡೆಸಿದ್ದಲ್ಲದೇ, ಆಕೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಆಕೆಯ ಕರಿಮಣಿ ಸರವನ್ನುಅಪಹರಿಸಿದ್ದ. ರಕ್ತಸಿಕ್ತ ಬಟ್ಟೆಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪ್ರಶಾಂತನನ್ನ ಕುಂದಾಪುರ ಪೊಲೀಸರು ಬಂಧಿಸಿದ್ದರು.
ಅತ್ಯಂತ ಕ್ರೂರವಾಗಿ ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಹಿನ್ನೆಲೆ ಆತನಿಗೆ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕರಾಗಿ ರವಿಕಿರಣ್ ಮುರುಡೇಶ್ವರ ವಾದಿಸಿದ್ದು, ಆರೋಪಿಯ ಮೇಲೆ ಹೊರಿಸಲಾದ ಎಲ್ಲಾ ಆಪಾದನೆಗಳು ಸಾಭೀತಾದ ಹಿನ್ನೆಲೆ ಕುಂದಾಪುರಲ್ಲಿನ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಪರಿಗಣಿಸಿ ಮರಣದಂಡನೆ ವಿಧಿಸಿದೆ.