ಮಂಗಳೂರು,ಮಾ 17 ( Daijiworld News/MSP): ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗಂಟಲಿನ ದ್ರವದ ಮಾದರಿ ಪರೀಕ್ಷೆಗಾಗಿ ಟೆಸ್ಟಿಂಗ್ ಲ್ಯಾಬ್ ತೆರೆಯಲು ಇಲಾಖೆ ನಿರ್ಧರಿಸಿದ್ದು, ಮಂಗಳೂರಿನಲ್ಲಿ ಅದಷ್ಟು ಬೇಗ ಲ್ಯಾಬ್ ತೆರೆಯಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಮಂಗಳೂರಿನಲ್ಲಿ ಕೊರೊನಾ ಶಂಕಿತರ ಗಂಟಲು ದ್ರವ ಪರೀಕ್ಷಾ ಲ್ಯಾಬ್ ತೆರೆಯಲು ಸರ್ಕಾರ ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಯಲ್ಲಿ ಒಂದು ಟೆಸ್ಟಿಂಗ್ ಲ್ಯಾಬ್ ತೆರೆಯಲಾಗುವುದು ಎಂದು ಹೇಳಿದರು.
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಸಾಕಷ್ಟು ದೇಶಗಳಿಂದ ಇಲ್ಲಿಗೆ ಬಂದಿಳಿಯುತ್ತಾರೆ. ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಸಾಕಷ್ಟು ಜನರು ದಿನನಿತ್ಯದ ವ್ಯಾಪಾರ - ವಹಿವಾಟಿಗಾಗಿ ಮಂಗಳೂರಿಗೆ ಭೇಟಿ ನೀಡುವುದರಿಂದ ಆದ್ಯತೆ ಮೇರೆಗೆ ಮಂಗಳೂರಿನಲ್ಲಿ ತುರ್ತಾಗಿ ಟೆಸ್ಟಿಂಗ್ ಲ್ಯಾಬ್ ಆರಂಭಿಸಲಾಗುವುದು ಎಂದು ಸಚಿವರು ಹೇಳಿದರು.
ರೈಲ್ವೇ ನಿಲ್ದಾಣಗಳಲ್ಲಿ ಇಂದಿನಿಂದ ನಿರಂತರವಾಗಿ ತಪಾಸಣೆ ಇರಲಿದ್ದು, ಬೀಚ್ ಗಳ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ ಎಂದರು.
ಈ ವೇಳೆ ವಿನಾ ಕಾರಣ ತಿರುಗಾಟ ನಡೆಸುವವರ ಹಾಗೂ ಸೂಚನೆಗಳನ್ನು ಪಾಲಿಸದವರ ವಿರುದ್ಧ ದಂಡ ಹಾಕುವ ಮೂಲಕ ನಿಯಂತ್ರಿಸಬೇಕು. ಕಲಬುರಗಿಯಿಂದ ಮಂಗಳೂರಿಗೆ ಬಸ್ ಸೇವೆಯನ್ನು ರದ್ದುಗೊಳಿಸಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ.ಖಾದರ್ ಸಭೆಯಲ್ಲಿ ಮನವಿ ಮಾಡಿದರು.