ಕಾರ್ಕಳ, ಮಾ.17 (Daijiworld News/MB) : ಕೊರೊನಾ ಸಾಂಕ್ರಾಮಿಕ ರೋಗದ ಭೀತಿ ಎದುರುಗೊಂಡಿರುವ ಹಿನ್ನಲ್ಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿಕೊಂಡ ಕಾರ್ಕಳ ಪುರಸಭೆಯು ಮಂಗಳವಾರಂದು ಕಾರ್ಕಳ ನಗರದ ಪ್ರಮುಖ ಯಾತ್ರಾಸ್ಥಳಗಳಿಗೆ ಬೀಗ ಜಡಿದಿದೆ.
ಐತಿಹಾಸಿಕ ಗೋಮ್ಮಟ್ಟಬೆಟ್ಟ, ಚತುರ್ಮುಖ ಬಸದಿ, ಆನೆಕೆರೆ ಪಾರ್ಕ್, ಕೋಟಿಚೆನ್ನಯ್ಯ ಥೀಪಾರ್ಕ್, ಈಜುಕೊಳಗಳಿಗೆ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ನೇತೃತ್ವದ ತಂಡವು ಬೀಗ ಜಡಿದಿದೆ.
ಕಾರ್ಕಳ ನಗರ ವ್ಯಾಪ್ತಿಯಲ್ಲಿ ಇರುವ ಚಿತ್ರಮಂದಿರಗಳಿಗೆ ಹಾಗೂ ಕಲ್ಯಾಣ ಮಂಟಪಗಳ ಮಾಲಕರೊಂದಿಗೆ ಸಮಲೋಚನೆ ನಡೆಸಿ ಯಾವುದೇ ಕಾರಣಕ್ಕೂ ಪ್ರದರ್ಶನ ಮತ್ತು ಸಭೆ, ಮದುವೆ ಹಾಗೂ ಇನ್ನಿತರ ಶುಭ ಕಾರ್ಯ ನಡೆಸಲು ಅವಕಾಶ ನೀಡದಂತೆ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ತಿಳಿಸಿದರು.
ರಸ್ತೆ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ತಿಂಡಿ-ತಿನಸು, ಚೈನೀಸ್ ಫಾಸ್ಟ್ ಫುಡ್,ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯ ಪದಾರ್ಥಗಳನ್ನು ಹಾಗೂ ಶನಿವಾರ ಸಂತೆ ನಡೆಸದಂತೆ ಸ್ವಷ್ಟ ಸೂಚನೆಯನ್ನು ನೀಡಿದರು.
ಮುಂದಿನ ಆದೇಶ ಬರುವವೆರೆಗೆ ಮೇಲಿನ ಅದೇಶ ಕಟ್ಟುನಿಟ್ಟಿನಿಂದ ನಗರದಲ್ಲಿ ಜಾರಿಯಲ್ಲಿ ಇರುತ್ತದೆ ಎಂದು ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ತಿಳಿಸಿದರು.
ಪರಿಸರ ಅಭಿಯಂತರ ಮಧನ್, ಕಂದಾಯ ಪರಿವೀಕ್ಷಕ ಸಂತೋಷ್, ಆರ್ಥಿಕ ವಿಭಾಗದ ಮೇಲ್ವಿಚಾರ ಶಿವಕುಮಾರ್ ಮತ್ತಿತ್ತರರು ಇದೇ ವೇಳೆಯಲ್ಲಿ ಜೊತೆಗಿದ್ದರು.