ಕಾಪು, ಮಾ 17 ( Daijiworld News/MSP): ಕಳೆದ ಎರಡೂವರೆ ವರ್ಷಗಳಲ್ಲಿ ಕಾಪುವಿನ ಸರ್ವತೋಮುಖ ಅಭಿವೃದ್ಧಿಗಾಗಿ ಯಾವುದೇ ರೀತಿಯ ಅನುದಾನ ಸಹಿತ ತೀರ್ಮಾನಗಳು ನಡೆಯದಿರುವುದನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಮಾ.26ರಂದು ಕಾಪು ಪುರಸಭೆ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ನಾವು ತಂದ ಅನುದಾನವನ್ನು ಬೇರೆಡೆ ವರ್ಗಾಯಿಸಿ ಅದಕ್ಕೆ ಗುದ್ದಲಿಪೂಜೆ ಅಥವಾ ಪ್ಲೆಕ್ಸ್ ಹಾಕುವಂತಹ ಕೆಲಸ ಮಾತ್ರ ಶಾಸಕರಿಂದ ನಡೆಯುತ್ತಿದೆ. ಹೊರತು ಬೇರೇನೂ ನಡೆದಿಲ್ಲ. ಪುರಸಭೆಗೆ ಮಂಜೂರಾದ ಅನುದಾನ ಬೇರೆಡೆ ವರ್ಗಾವಣೆಯಾದ ಬಗ್ಗೆಯೂ ತನಿಖೆಯಾಗಬೇಕು. ನಗರೋತ್ಥಾನ ಕಾಮಗಾರಿಗಳು ಕಳಪೆಯಾಗಿರುವ ಬಗ್ಗೆಯೂ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು. ಶಾಸಕರು ಕಾಲಕಾಲಕ್ಕೆ ಸೂಕ್ತ ತೀರ್ಮಾನ ತೆಗೆದುಕೊಳ್ಳದೆ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ರಾಜೀವ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಎರಡೂವರೆ ವರ್ಷ ಕಳೆದರೂ ಕಾಪು ನಗರ ಪ್ರಾಧಿಕಾರಕ್ಕೆ ಇನ್ನೂ ಪ್ರತ್ಯೇಕ ಬೈಲಾ ರಚನೆ ಬಗ್ಗೆ ಪ್ರಯತ್ನಗಳು ನಡೆಯಲಿಲ್ಲ. ಕೊಳಚೆ ನೀರು ಶುದ್ಧಿಕರಣ ಘಟಕ ನಿರ್ಮಾಣಕ್ಕೆ ತಕರಾರು ಮಾಡುವ ಮೂಲಕ ಅನುದಾನ ಸರ್ಕಾರಕ್ಕೆ ಹಿಂದಕ್ಕೆ ಹೋಗುವ ಪರಿಸ್ಥಿತಿ ಬಂದಿದೆ. ೭೦ ಲಕ್ಷ ರೂ ವೆಚ್ಚದಲ್ಲಿ ಕೇವಲ ಪೈಪು ಅಳವಡಿಕೆ ಕಾಮಗಾರಿ ಮಾತ್ರ ಅಗಿದ್ದು, ಶುದ್ಧಿಕರಣ ಘಟಕಕ್ಕೆ ಗುರುತಿಸಿದ ಜಾಗದಲ್ಲಿ ತಕರಾರು ಸೃಷ್ಟಿಸಿ ವಿರೋಧ ವ್ಯಕ್ತಪಡಿಸುವ ಪ್ರಯತ್ನಗಳು ನಡೆದು ಹಿನ್ನಡೆಯಾಗಿದೆ. ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿಯಾಗಿ ಈ ಹಿಂದೆ ಮುಖ್ಯಮಂತ್ರಿಗಳಿಂದ ಶಿಲಾನ್ಯಾಸವಾದರೂ ಅದಕ್ಕೂ ತಕರಾರು ಉಂಟು ಮಾಡಿ ಎಬ್ಬಿಸಿ ಅನುಷ್ಟಾನಕ್ಕೆ ಅಡಚಣೆಯಾಗಿದೆ. ಎಲ್ಲೂರಿನ ಘನತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೂ ತಡೆಯಾಜ್ಞೆ ತಂದು ಯೋಜನೆ ವಿಳಂಬವಾಗುವ ಪ್ರಮೇಯ ಎದುರಾಗಿದೆ ಎಂದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ ಚಂದ್ರ ಸುವರ್ಣ, ಪಕ್ಷದ ಮುಖಂಡರಾದ ದೇವಿಪ್ರಸಾದ್ ಶೆಟ್ಟಿ, ಮಹಮ್ಮದ್ ಸಾಧಿಕ್, ಮನಹರ್ ಇಬ್ರಾಹಿಂ, ಹರೀಶ್ ನಾಯಕ್, ದೀಪಕ್ ಎರ್ಮಾಳ್, ಸುನೀಲ್ ಬಂಗೇರ, ಅಮೀರುದ್ದೀನ್, ಪುರಸಭಾ ಸದಸ್ಯರಾದ ಕೆ. ಎಚ್. ಉಸ್ಮಾನ್, ಅಬ್ದುಲ್ ಹಮೀದ್, ಶಾಬು ಸಾಹೇಬ್, ಮಹಮ್ಮದ್ ಇಮ್ರಾನ್, ಸುರೇಶ್ ದೇವಾಡಿಗ, ಮಾಲಿನಿ ಶೆಟ್ಟಿ, ಸೌಮ್ಯ, ವಿಜಯಲಕ್ಷ್ಮಿ, ಅಶ್ವಿನಿ, ಸುಲೋಚನ ಬಂಗೇರ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.