ಸುಳ್ಯ, ಫೆ 20: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸಹಪಾಠಿಯೇ ಚೂರಿಯಿಂದ ಇರಿದು ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಕೊಲೆಯಾದ ವಿದ್ಯಾರ್ಥಿನಿಯನ್ನು ಅಕ್ಷತಾ ಎಂದು ಗುರುತಿಸಲಾಗಿದೆ. ಈಕೆ ಸುಳ್ಯದ ನೆಹರೂ ಸ್ಮಾರಕ ಕಾಲೇಜಿನ (ಎನ್.ಎಮ್.ಸಿ) ಬಿ.ಎಸ್.ಸಿ ಪದವಿ ವಿದ್ಯಾರ್ಥಿನಿಯಾಗಿದ್ದಳು. ಅದೇ ಕಾಲೇಜಿನ ನೆಲ್ಲೂರು ಕೆಮ್ರಾಜೆ ನಿವಾಸಿ ಚಂದ್ರಶೇಖರ್ ಎಂಬುವವರ ಪುತ್ರ ಕಾರ್ತಿಕ್ ಕೊಲೆ ಆರೋಪಿ.
ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಶಾಂತಿ ನಗರದ ನಿವಾಸಿಯಾಗಿರುವ ಅಕ್ಷತಾ ಇಂದು ಸಂಜೆ ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ರೋಟರಿ ಶಾಲೆಯ ಬಳಿ ಆರೋಪಿ ಕಾರ್ತಿಕ್ ಈ ಕೃತ್ಯ ಎಸಗಿದ್ದು, ಅಕ್ಷತಾ ಕುತ್ತಿಗೆಗೆ ಆರು ಬಾರಿ ಚೂರಿಯಿಂದ ಇರಿದಿದ್ದಾನೆ.
ಇದಾದ ಬಳಿಕ ಕಾರ್ತಿಕ್ ತನ್ನ ಕೈಯನ್ನು ತಾನೇ ಚೂರಿಯಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಅಕ್ಷತಾ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ, ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾಳೆ.
ಪ್ರೇಮ ವೈಫಲ್ಯವೇ ಘಟನೆಗೆ ಕಾರಣವಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ದಕ್ಷಿಣ ಕನ್ನಡ ಎಸ್ಪಿ ಡಾ.ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.
ಕಾರ್ತಿಕ್ ಇದೀಗ ಪೊಲೀಸರ ವಶದಲ್ಲಿದ್ದು, ಸುಳ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.