ಮಂಗಳೂರು, ಮಾ 17(DaijiworldNews/SM): ಕೊರೊನಾ ಆರ್ಭಟ ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ಜನರೂ ಕೂಡ ಭಯಭೀತರಾಗುತ್ತಿದ್ದಾರೆ. ಆರೋಗ್ಯ ಇಲಾಖೆ ಜಿಲ್ಲಾಡಳಿತ ಎಚ್ಚರಿಕೆಯನ್ನು ವಹಿಸಲು ಸೂಚನೆ ನೀಡಿದ್ದು, ಜನತೆ ದೂರದ ಪ್ರಯಾಣಕ್ಕೆ ಬ್ರೇಕ್ ಹಾಕಿದ್ದಾರೆ. ಇದೀಗ ಕೊರೊನಾ ಎಫೆಕ್ಟ್ ಗೆ ಮಂಗಳೂರು ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣ ಸ್ತಬ್ಧಗೊಂಡಿದೆ.
ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಗೆ ತೆರಳುವ ಪ್ರಯಾಣಿಕರ ಕೊರತೆ ಹಿನ್ನೆಲೆ ಬಸ್ ಸಂಚಾರ ಕಡಿತಗೊಂಡಿದೆ. ಪ್ರಯಾಣಿಕರಿಲ್ಲದೆ ಬಸ್ ಗಳು ಖಾಲಿ ಖಾಲಿಯಾಗಿವೆ. ಅಲ್ಲದೆ ಮಂಗಳೂರಿನಲ್ಲಿ ಪ್ರಯಾಣಿಕರಿಲ್ಲದ ಕಾರಣದಿಂದಾಗಿ ಹಲವು ಬಸ್ ಗಳು ಸೇವೆಯನ್ನು ಸ್ಥಗಿತಗೊಳಿಸಿದ್ದು, ಈ ಬಗ್ಗೆ ದಾಯ್ಜಿವರ್ಲ್ಡ್ ಗೆ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.
ಕೊರೋನ ಭೀತಿಯಿಂದಾಗಿ ಜನರು ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಕೆಎಸ್ ಆರ್ ಟಿಸಿಗೆ ಬಾರೀ ನಷ್ಟವುಂಟಾಗಿದೆ. ಪ್ರಯಾಣಿಕರಿಲ್ಲದಿರುವುದರಿಂದ ಪ್ರತಿ ದಿನ 5.30 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಇನ್ನು ಟಿಕೆಟ್ ಬುಕ್ಕಿಂಗ್ ನಲ್ಲೂ ಬಾರೀ ಪ್ರಮಾಣದ ಇಳಿಕೆಯಾಗಿದೆ.
ಈ ನಡುವೆ ಕೆಎಸ್ಸಾರ್ಟಿಸಿ ಬಸ್ ನಲ್ಲಿ ಸ್ಲೀಪರ್ ನಲ್ಲಿ ತೆರಳುವ ಪ್ರಯಾಣಿಕರಿಗೆ ನೀಡುತ್ತಿದ್ದ ಬೆಡ್ ಶೀಟ್ ಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದ್ದು, ಸುರಕ್ಷತೆಯ ದೃಷ್ಠಿಯಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.