ಮಂಗಳೂರು, ಮಾ.18 (Daijiworld News/MB) : ದ.ಕ. ಜಿಲ್ಲಾಡಳಿತ ದುಬೈನಿಂದ ಮಂಗಳೂರಿಗೆ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ 3 ವಿಧದಲ್ಲಿ ತಪಾಸಣೆಗೊಳಪಡಿಸಲು ತೀರ್ಮಾನಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ತಿಳಿಸಿದ್ದಾರೆ.
ಸೋಂಕು ಲಕ್ಷಣಗಳು ಹೊಂದಿರುವ 60 ವರ್ಷದೊಳಗಿನವರು 'ಎ' ಕೆಟಗರಿಯಾಗಿದ್ದು ಅವರನ್ನು ವಿಮಾನ ನಿಲ್ದಾಣದಲ್ಲಿ ನಿಗದಿ ಮಾಡಲಾಗಿರುವ ಆ್ಯಂಬುಲೆನ್ಸ್ ಮೂಲಕ ವೆನ್ಲಾಕ್ ಆಸ್ಪತ್ರೆಗೆ ಕರೆ ತಂದು ಆಸ್ಪತ್ರೆಗೆ ದಾಖಲಿಸಿ ತಪಾಸಣೆ ಮಾಡಲಾಗುತ್ತದೆ ಎಂದಿದ್ದಾರೆ.
60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಸೋಂಕು ಲಕ್ಷಣ ಹೊಂದಿರುವವರನ್ನು 'ಬಿ' ಕೆಟಗರಿಗೊಳಪಡುತ್ತಾರೆ. ಇಎಸ್ಐ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ನಿಗಾ ವಹಿಸಲು 80 ಬೆಡ್ಗಳನ್ನು ಮೀಸಲಿರಿಸಿದ್ದು ಅವರನ್ನು ಅಲ್ಲಿ ದಾಖಲಿಸಲಾಗುತ್ತದೆ. ಪ್ರಯಾಣಿಕರು ಕಾಸರಗೋಡಿನವರಾಗಿದ್ದಲ್ಲಿ, ಅವರನ್ನು ಕಾಸರಗೋಡಿನ ನಿಗಾವಣಾ ಕೇಂದ್ರಗಳಿಗೆ ವಿಮಾನ ನಿಲ್ದಾಣದಲ್ಲಿ ನಿಗದಿಪಡಿಸಿದ ಬಸ್ ಮೂಲಕ ಕಳುಹಿಸಲಾಗುತ್ತದೆ. ಇದಕ್ಕಾಗಿ ಅಲ್ಲಿನ ಆಡಳಿತದ ಸಹಕಾರವನ್ನೂ ಕೋರಲಾಗಿದೆ. 'ಬಿ' ಕೆಟಗರಿಯಲ್ಲಿ ಸೋಂಕು ಇರುವುದುಮ ಖಚಿವಾದ್ದಲ್ಲಿ ಅವರನ್ನು 14 ದಿನಗಳ ಕಾಲು ಪ್ರತ್ಯೇಕವಾಗಿ ಕೊಠಡಿಯಲ್ಲಿ ಇರಿಸಲಾಗುತ್ತದೆ. ವರದಿ ನೆಗೆಟಿವ್ ಆಗಿದ್ದಲ್ಲಿ 14 ದಿನಗಳ ಕಾಲ ಮನೆಯಲ್ಲೇ ನಿಗಾ ಇರಿಸುವಂತೆ ಸೂಚನೆ ನೀಡಿ ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
'ಸಿ' ಕೆಟಗರಿಯಡಿಯಲ್ಲಿ ಯಾವುದೇ ಲಕ್ಷಣಗಳು ಇಲ್ಲದ ಪ್ರಯಾಣಿಕರು ಒಳಗೊಳ್ಳುತ್ತಾರೆ. ಇವರನ್ನು 14 ದಿನಗಳ ಕಾಲ ಮನೆಯಲ್ಲೇ ನಿಗಾ ಇರಿಸುವಂತೆ ಸೂಚಿಸಲಾಗುತ್ತದೆ. ಈ ವ್ಯವಸ್ಥೆಯನ್ನು ಇಂದಿನಿಂದ ಪ್ರಾಯೋಗಿಕ ನೆಲೆಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಸ್ಪಷ್ಟನೆ ನೀಡಿದ್ದಾರೆ.
ದುಬೈನಿಂದ ಆಗಮಿಸುವ ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ ಎಂಬ ವದಂತಿ ಕುರಿತಾಗಿ ಪ್ರಶ್ನಿಸಿದಾಗ ದುಬೈನಿಂದ ಆಗಮಿಸುವ ಎಲ್ಲರನ್ನೂ ವೆನ್ಲಾಕ್ ಆಸ್ಪತ್ರೆಗೆ ಕರೆತಂದು ತಪಾಸಣೆ ಮಾಡಲಾಗುತ್ತದೆ ಎಂಬುದು ತಪ್ಪು ಮಾಹಿತಿ. ಎಲ್ಲರ ಥರ್ಮಲ್ ತಪಾಸಣೆಯನ್ನು ವಿಮಾನ ನಿಲ್ದಾಣದಲ್ಲಿಯೇ ಮಾಡಲಾಗುತ್ತದೆ. ಸೋಂಕು ಲಕ್ಷಣವಿದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ ಮುಂದಿನ ತಪಾಸಣೆಗೆ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.