ಮಂಗಳೂರು, ಮಾ.18 (DaijiworldNews/PY) : "ಉತ್ತರ ಕರ್ನಾಟಕ ಬಸ್ಗಳನ್ನು ಸ್ವಲ್ಪ ದಿನಗಳ ಮಟ್ಟಿಗೆ ತಡೆಯಬೇಕು. ಹಾಗೇ, ಕೆಎಸ್ಆರ್ಟಿಸಿ ಬಸ್ನಲ್ಲಿ ಬರುವವರನ್ನು ತಪಾಸಣೆ ಮಾಡಬೇಕು" ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, "ಉತ್ತರ ಕರ್ನಾಟಕ ಬಸ್ಗಳನ್ನು ಸ್ವಲ್ಪ ದಿನಗಳ ಮಟ್ಟಿಗೆ ತಡೆಯಬೇಕು. ಹಾಗೇ, ಕೆಎಸ್ಆರ್ಟಿಸಿ ಬಸ್ನಲ್ಲಿ ಬರುವವರನ್ನು ತಪಾಸಣೆ ಮಾಡಬೇಕು. ಗಡಿಭಾಗ ತಲಪಾಡಿಯಿಂದ ಸೋಂಕಿತರು ಬಾರದಂತೆ ತಡೆಯಬೇಕು. ಹಾಗಾಗಿ ತಲಪಾಡಿ, ರೈಲು ನಿಲ್ದಾಣದಲ್ಲಿ ತಪಾಸಣೆ ಮಾಡಬೇಕು. ಅಲ್ಲದೇ, ಎಲ್ಲಾ ವಿಮಾನ ನಿಲ್ದಾಣದಲ್ಲಿ ವ್ಯವಸ್ಥಿತ ತಪಾಸಣೆ ಮಾಡಬೇಕು. ಅಷ್ಟು ಸುಲಭವಾಗಿ ವೈರಸ್ ಅನ್ನು ತಡೆಯಲು ಸಾಧ್ಯವಿಲ್ಲ, ಹಾಗಾಗಿ ನಾವೇ ಅದರ ಬಗ್ಗೆ ಜಾಗ್ರತೆ ವಹಿಸಬೇಕು" ಎಂದರು.
"ಕೊರೊನಾ ವೈರಸ್ ಆತಂಕ ವಿಚಾರವಾಗಿ ರಾಜ್ಯ ಸರಕಾರ ಜಿಲ್ಲಾಡಳಿತ ಹಲವು ಕ್ರಮ ಕೈಗೊಂಡಿದೆ. ಜನ ಸಾಮಾನ್ಯರು ಇದಕ್ಕೆ ಸಹಕಾರ ನೀಡಬೇಕು. ಸ್ವಯಂ ನಿಯಂತ್ರಣದಿಂದ ಕೊರೊನಾ ವೈರಸ್ ಹರಡದಂತೆ ನೋಡಿಕೊಳ್ಳಬೇಕು. ಇದು ಅಷ್ಟು ಸುಲಭವಾಗಿ ಹರಡುವ ಸಾಧ್ಯತೆ ಕಡಿಮೆ. ಅದಕ್ಕಾಗಿ ಪ್ರಕೃತಿಯಲ್ಲಿ ಸಿಗುವ ಅಹಾರ ಸೇವಿಸಬೇಕು. ಕೊರೊನಾ ಮುಂಜಾಗ್ರತೆಯ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಇನ್ನಷ್ಟು ಕ್ರಮಕೈಗೊಳ್ಳಬೇಕು" ಎಂದು ತಿಳಿಸಿದರು.
ವಿಶೇಷ ವಾರ್ಡ್ಗಳ ಕುರಿತಾಗಿ ಮಾತನಾಡಿದ ಅವರು, "ವಿಶೇಷ ವಾರ್ಡ್ಗಳನ್ನು ಪ್ರತ್ಯೇಕ ಕಟ್ಟಡದಲ್ಲಿ ಮಾಡಬೇಕು. ಜನ ವಸತಿಯಿದ್ದ ಕಡೆ ವಾರ್ಡ್ ಸ್ಥಾಪನೆಗೆ ಒಪ್ಪುವುದಿಲ್ಲ. ದುಡಿಯುವ ವರ್ಗಕ್ಕೆ ಸಮಸ್ಯೆ ನಿಜ, ಹಾಗಾಗಿ ತಿಂಗಳ ಬಾಡಿಗೆಯನ್ನು ಸ್ವಲ್ಪ ಕಡಿಮೆ ಮಾಡಬೇಕು. ಸರಕಾರ ಕೂಡ ದುಡಿಯುವ ವರ್ಗದ ಬಗ್ಗೆ ಕಾಳಜಿ ವಹಿಸಿ ಇದಕ್ಕೆ ಕ್ರಮ ಕೈಗೊಳ್ಳಬೇಕು" ಎಂದು ತಿಳಿಸಿದರು.