ಉಡುಪಿ, ಮಾ.18 (Daijiworld News/MB) : ಕೊರೊನಾ ವೈರಸ್ ಭೀತಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಸಿ.ಆರ್.ಪಿ.ಸಿ. ಸೆಕ್ಷನ್ 144 (3) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಕೆಲವೊಂದು ನಿರ್ಬಂಧಗಳನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಉತ್ಸವ/ಜಾತ್ರೆಗಳಲ್ಲಿ ಕೇವಲ ಧಾರ್ಮಿಕ ಕೇಂದ್ರಗಳ ಸಿಬ್ಬಂದಿ ಮಾತ್ರ ಭಾಗವಹಿಸುವಂತೆ ಸೂಚಿಸಿದ್ದು ಉತ್ಸವಗಳಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. ಹಾಗೆಯೇ ದೇವಸ್ಥಾನಗಳಲ್ಲಿ ಕೇವಲ ದೇವರ ದರ್ಶನವನ್ನು ಹೊರತು ಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ರದ್ದು ಮಾಡಲಾಗಿದ್ದು ದೇವಸ್ಥಾನಗಳಿಗೆ ಬರುವ ಸಾರ್ವಜನಿಕರು ತಂಗಲು ಅವಕಾಶ ಇರುವುದಿಲ್ಲ.
ದೇವಸ್ಥಾನ, ಮಸೀದಿ, ಚರ್ಚ್ ಒಳಗೊಂಡತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಗುಂಪುಗುಂಪಾಗಿ ಸಾರ್ವಜನಿಕರು ಪ್ರವೇಶಿಸಬಾರದೆಂದು ಆದೇಶದಲ್ಲಿ ಸೂಚಿಸಿದ್ದಾರೆ.
ಹಾಗೆಯೇ ಬೇಸಿಗೆ ಶಿಬಿರ, ಸಮಾರಂಭಗಳು, ವಿಚಾರ ಸಂಕೀರ್ಣಗಳು, ಕ್ರೀಡಾಕೂಟಗಳು, ಒಂದೆಡೆ ಜನ ಸೇರುವ ಮತ್ತಿತರ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಆದೇಶಿಸಿದ್ದಾರೆ.
ವಾರದ ಸಂತೆಗಳನ್ನು, ಬೀಚ್, ಪ್ರವಾಸಿ ತಾಣಗಳಿಗೆ ಸಾರ್ವಜನಿಕರು ಪ್ರವೇಶವನ್ನು ನಿರ್ಬಂಧಿಸಿದ್ದು ಮದುವೆ, ನಿಶ್ಚಿತಾರ್ಥ ಮೊದಲಾದ ಸಮಾರಂಭಗಳನ್ನು ಹೆಚ್ಚಿನ ಜನಸಂದಣಿ ಸೇರದಂತೆ ಆಯೋಜಿಸಬೇಕು. ಹೆಚ್ಚು ಜನ ಸೇರುವಂತಹ ಕುಟುಂಬದ ಧಾರ್ಮಿಕ ಕಾರ್ಯಕ್ರಮಗಳನ್ನು ತಮ್ಮ ಸ್ವಂತ ಸ್ಥಳಗಳಲ್ಲಿ ಸರಳವಾಗಿ ಆಚರಿಸಬೇಕು ಹಾಗೂ ಅನಗತ್ಯವಾಗಿ ಹೊರಗಿನವರು ಸೇರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಯವರು ಸಿ.ಆರ್.ಪಿ.ಸಿ. ಸೆಕ್ಷನ್ 144 (3) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಕೆಲವೊಂದು ನಿರ್ಬಂಧಗಳನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಸೆಕ್ಷನ್ 144 ಜಾರಿಗೊಳಿಸಿಲ್ಲ.