ಕಡಬ, ಮಾ.18 (DaijiworldNews/PY) : ಕೊಯ್ಲ ಗ್ರಾಮ ಪಂಚಾಯತಿಗೆ ಒಳಪಡುವ ಕೆಮ್ಮಾರ ಸಮೀಪದ ಬಡಿಲದ ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿಗೆ ಬಿಡುಗಡೆಗೊಂಡಿರುವ ಅನುದಾನವನ್ನು ಅಧ್ಯಕ್ಷರು ದುರುಪಯೋಗ ಪಡಿಸಿಕೊಂಡಿದ್ದು, ಆ ಮೂಲಕ ಅಲ್ಪಸಂಖ್ಯಾತ ಕಾಲೊನಿಯ ನಾಗರಿಕರ ಅವಕಾಶಗಳನ್ನು ಕಸಿಯುವ ಮೂಲಕ ಅನ್ಯಾಯ ಎಸಗಿದ್ದು, ಅಲ್ಲದೆ ಹೇಂತಾರು ಅಲ್ಪಸಂಖ್ಯಾತರ ಕಾಲೊನಿಗೆ ಮಂಜೂರಾಗಿದ್ದ ಅನುದಾನವನ್ನು ನೆತ್ತರಕೆರೆಗೆ ವರ್ಗಾಯಿಸಿ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ಈ ಬಗ್ಗೆ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಗೆ ಸ್ಥಳೀಯ ಪಂಚಾಯತ್ ಸದಸ್ಯ ಕೆ.ಎ.ಸುಲೈಮಾನ್ ಅವರು ದೂರು ಸಲ್ಲಿಸಿದ್ದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ ಆರೋಪಿತರ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ, ಸಾಮಾಜಿಕ ಹೋರಾಟಗಾರ ಅಝೀಝ್ ಬಿ.ಕೆ. ಅವರು ಆಯೋಗಕ್ಕೆ ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ಈ ಬಗ್ಗೆ ಯಾವುದೇ ಮಾಹಿತಿ ನೀಡದೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕಡೆಗಣಿಸಿದೆ. ಈ ಒಂದು ಗಂಭೀರ ಸ್ವರೂಪದ ಘಟನೆಯನ್ನು ರಾಜಕೀಯ ಪ್ರೇರಿತವಾದ ಹೇಳಿಕೆ ಎನ್ನುವ ಮೂಲಕ ಪತ್ರಿಕಾಗೋಷ್ಠಿ ಕರೆದು ಉಡಾಫೆಯ ಉತ್ತರ ನೀಡಿದ್ದು, ಸಂಬಂಧಿಸಿದ ದಾಖಲೆಯನ್ನು ತನಿಖಾ ಅಧಿಕಾರಿಗಳು ಸರಿಯಾಗಿ ಪರಿಶೀಲಿಸದೇ ಸ್ಥಳೀಯ ಪಂಚಾಯತ್ ಸದಸ್ಯರ ಹೇಳಿಕೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಅಗೌರವವನ್ನು ತೋರಿದ್ದು, ಇದರಲ್ಲಿ ಪಂಚಾಯತ್ ಅಧ್ಯಕ್ಷೆ ಮತ್ತು ಇನ್ನಿತರ ಪಂಚಾಯತ್ ಸದಸ್ಯರು ಈ ಬಗ್ಗೆ ಧ್ವನಿಯೆತ್ತದಂತೆ ಅವ್ಯವಹಾರದ ಪಾಲು ನೀಡಿರುವ ಬಗ್ಗೆ ಸ್ಥಳೀಯ ನಾಗರಿಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಒಂದು ಆರೋಪಕ್ಕೆ ಪುಷ್ಟಿ ನೀಡುವಂತೆ ಅಧ್ಯಕ್ಷೆ ಹೇಮಾ ಶೆಟ್ಟಿ ಕರೆದಿರುವ ಪತ್ರಿಕಾಗೋಷ್ಠಿಯಲ್ಲಿ ಭೀಪಾತುಮ್ಮ ಇವರ ಹೆಸರನ್ನು ಸೇರಿಸಲಾಗಿತ್ತು.
ಇವರಲ್ಲಿ ಈ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯ ಸರ್ವೋತ್ತಮ ಗೌಡ ಅವರನ್ನು ಒಳಗೊಂಡಂತೆ ಗ್ರಾಮಸ್ಥರು ವಿಚಾರಿಸಿದಾಗ ನನಗರಿವಿಲ್ಲದೇ ನನ್ನ ಹೆಸರನ್ನು ಹಾಕಲಾಗಿದೆ. ಈ ಬಗ್ಗೆ ನನ್ನ ಬಳಿ ಯಾವುದೇ ಚರ್ಚೆ ನಡೆಸಿರುವುದಿಲ್ಲ, ಈ ವಿಚಾರವನ್ನು ಬಹಿರಂಗವಾಗಿ ಹೇಳಲು ಸಿದ್ದನಿದ್ದೇನೆ ಹಾಗೂ ಕೆ.ಎ.ಸುಲೈಮಾನ್ ಅವರ ಆರೋಪವು ನೂರಕ್ಕೆ ನೂರರಷ್ಟು ಸತ್ಯ ಎಂದು ಹೇಳಿದರು. ಅದೇ ರೀತಿ ಅನ್ಯಾಯಕ್ಕೆ ಒಳಗಾದ ಅಲ್ಪಸಂಖ್ಯಾತರ ಕಾಲೊನಿಯ ಪರಿಶೀಲನೆಗಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಸರ್ವೊತ್ತಮ ಗೌಡ ಸ್ಥಳ ಪರಿಶೀಲನೆ ನಡೆಸಿದ್ದು ಇದೊಂದು ದೊಡ್ಡ ಮಟ್ಟಿನ ಅವ್ಯವಹಾರ ಮತ್ತು ಅಲ್ಪಸಂಖ್ಯಾತರಿಗೆ ಮಾಡಿದ ಅನ್ಯಾಯವಾಗಿದೆ. ಉನ್ನತ ಮಟ್ಟಿನಲ್ಲಿ ಈ ಬಗ್ಗೆ ಚರ್ಚಿಸಿ ನ್ಯಾಯ ಒದಗಿಸಿಕೊಡುವ ಭರವಸೆಯನ್ನು ನೀಡಿದರು, ಈ ಸಂದರ್ಭದಲ್ಲಿ ಕೊಲ್ಯ ಒಂದನೇ ವಾರ್ಡ್ ಸದಸ್ಯರಾದ ಕೆ.ಎ ಸುಲೈಮಾನ್ ಅನ್ಯಾಯದ ವಿರುದ್ಧ ಕಾನೂನಾತ್ಮಕ ಹೋರಾಟದ ಮೂಲಕ ಸ್ಥಳೀಯ ನಾಗರಿಕರ ಜೊತೆಗೂಡಿ ನ್ಯಾಯ ಪಡೆಯುವವರೆಗೂ ಹೋರಾಟ ಮುಂದುವರಿಯಲಿದೆ ಹಾಗೂ ಗೆಲ್ಲಿಸಿದ ಸ್ಥಳೀಯ ನಾಗರಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನಿಮ್ಮ ಸಹಕಾರ ಕೂಡಾ ಅತ್ಯಗತ್ಯ ಎಂದು ಹೇಳಿದ್ದಾರೆ.
ಈ ಸಂದರ್ಭ ಸಾಮಾಜಿಕ ಹೋರಾಟಗಾರ ಅಝೀಝ್ ಬಿ.ಕೆ, ರಾಮಕುಂಜ ಪಂಚಾಯತ್ ಸದಸ್ಯರಾದ ಯತೀಶ್ ಕುಮಾರ್, ಅಡ್ವೊಕೇಟ್ ಕಬೀರ್ ಕೆಮ್ಮಾರ, ಕೆಮ್ಮಾರ ಶಾಲೆಯ ಎಸ್ಡಿಎಂಸಿ ಮಾಜಿ ಅಧ್ಯಕ್ಷೆ ಸೆಲಿಕತ್, ಸ್ಥಳೀಯ ಗ್ರಾಮಸ್ಥರಾದ ಆದಂ ಕ್ಯೊಲ, ಅಬ್ಬಾಸ್, ಎನ್.ಎ ಇಸಾಕ್, ಇಬ್ರಾಹಿಂ ಬಡಿಲ, ಹಂಝ ಬಡ್ಡಮೆ, ರವೂಫ್ ಬಡಿಲ, ಜುನೈದ್, ಜಲೀಲ್ ಎನ್.ಎ ಮತ್ತಿತರರು ಉಪಸ್ಥಿತರಿದ್ದರು.