ಬಂಟ್ವಾಳ, ಮಾ 18(DaijiworldNews/SM): ಕೊರೊನಾ ಹಾಗೂ ಇದರೊಂದಿಗೆ ಹಕ್ಕಿಜ್ವರ ಹಿನ್ನೆಲೆಯಲ್ಲಿ ಕೋಳಿಮಾಂಸ ಸೇವಿಸಬಹುದೇ ಎಂಬ ಆತಂಕ, ಸಾರ್ವಜನಿಕರಲ್ಲಿ ಮೂಡುತ್ತಿರುವ ಗೊಂದಲದ ಕುರಿತು ಬಂಟ್ವಾಳ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆತಂಕ ವ್ಯಕ್ತಪಡಿಸಿದರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.
ಈ ಸಂದರ್ಭ ಸದಸ್ಯ ಪ್ರಭಾಕರ ಪ್ರಭು ಕೊರೊನಾ ಕುರಿತು ಗೊಂದಲಗಳನ್ನು ಪ್ರಸ್ತಾಪಿಸಿದರು. ತಾಲೂಕಿನಾದ್ಯಂತ ಜಾಗೃತಿ ಮೂಡಿಸುವ ತಹಶೀಲ್ದಾರ್ ಮತ್ತು ಆರೋಗ್ಯಾಧಿಕಾರಿ ಕಾರ್ಯವನ್ನು ಅವರು ಶ್ಲಾಘಿಸಿದರು. ಬಂಟ್ವಾಳ ತಾಲೂಕಿನ ಗಡಿ ಪ್ರದೇಶವಾದ ಕರೋಪಾಡಿ, ಕನ್ಯಾನ, ಪೆರುವಾಯಿ, ಬಾಕ್ರಬೈಲ್, ಕುರ್ನಾಡು ಕಡೆಗಳಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ನಿಗಾ ಇರಿಸಲಾಗಿದೆ. ಈ ಕುರಿತು ಈಗಾಗಲೇ ತಹಶೀಲ್ದಾರ್ ಮತ್ತು ಆರೋಗ್ಯಾಧಿಕಾರಿ ಈ ಪ್ರದೇಶಗಳಿಗೆ ತೆರಳಿ ಕೈಗೊಳ್ಳಬೇಕಾದ ಕ್ರಮಗಳನ್ನು ಇಲಾಖಾ ಸಿಬ್ಬಂದಿಗೆ ಸೂಚಿಸಲಗಿದೆ ಎಂದು ಇಒ ರಾಜಣ್ಣ ತಿಳಿಸಿದರು.
ಇದೇ ವೇಳೆ ಕೋಳಿಗಳನ್ನು ತಿನ್ನಬಹುದೇ ಬೇಡವೇ ಎಂಬ ಕುರಿತು ಚರ್ಚೆ ನಡೆಯಿತು. ಈ ಸಂದರ್ಭ ಉತ್ತರಿಸಿದ ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಹೆನ್ರಿ, ಕೇರಳದಿಂದ ಕೋಳಿಗಳು ಸರಬರಾಜಾಗುತ್ತಿಲ್ಲ. ಕೋಳಿ ಮಾಂಸ ತಿನ್ನುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಹಕ್ಕಿಜ್ವರದಿಂದ ಕೋಳಿಗಳು ಬಾಧಿತವಾಗಿಲ್ಲ ಎಂದರು.
ವಿದೇಶದಿಂದ ಮರಳಿದವರೆಲ್ಲರೂ ಶಂಕಿತರಲ್ಲ. ಅವರ ಕುರಿತು ಆರೋಗ್ಯ ಇಲಾಖೆ ನಿಗಾ ಇರಿಸುತ್ತದೆಯೇ ವಿನಃ ಯಾರೂ ಕೂಡ ಕೊರೊನಾ ಶಂಕಿತರು ಎಂದೆನಿಸುವುದಿಲ್ಲ. ಬಂಟ್ವಾಳ, ವಾಮದಪದವು ಮತ್ತು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಐಸೋಲೇಶನ್ ವಾರ್ಡ್ ಇದೆ. ಇದುವರೆಗೆ ಬಂಟ್ವಾಳದಿಂದ ಕಳುಹಿಸಿದವರ ಸ್ಯಾಂಪಲ್ ಗಳಲ್ಲೂ ಕೊರೊನಾ ಕಂಡುಬಂದಿಲ್ಲ. ಊಹಾಪೋಹಗಳನ್ನು ಹರಡಿದರೆ ಕಠಿಣವಾದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಇನ್ನು ಕುರ್ನಾಡು ಗ್ರಾಮದ ಕಟ್ಟೆಮಾರು ಎಂಬಲ್ಲಿ ಗುಡ್ಡೆಯೊಂದು ಜರಿದು ವರ್ಷದ ಹತ್ತಿರವಾಯಿತು. ಸಮಸ್ಯೆ ಪರಿಹಾರವಾಗಿಲ್ಲ ಎಂದು ದೂರಿದರು. ಉತ್ತರಿಸಿದ ತಹಶೀಲ್ದಾರ್ ರಶ್ಮಿ ಎಸ್.ಆರ್, ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕರೋಪಾಡಿ ಗ್ರಾಮದ ಮಿತ್ತನಡ್ಕ ಶಾಲೆ ವಿದ್ಯಾರ್ಥಿಗಳಿಗೆ ವಾಂತಿ ಬೇಧಿ ಸಮಸ್ಯೆಗೆ ಕಲುಷಿತ ನೀರು ಕಾರಣ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಸದಸ್ಯ ಉಸ್ಮಾನ್ ಕರೋಪಾಡಿ ಪ್ರಶ್ನೆಗೆ ಡಾ. ದೀಪಾ ಪ್ರಭು ಉತ್ತರಿಸಿದರು. ಕರೋಪಾಡಿ ಗ್ರಾಮದ ಪರಿಶಿಷ್ಟ ಪಂಗಡದ ಮನೆಗಳಿಗೆ ವಿದ್ಯುತ್ ಸಂಪರ್ಕ ಇನ್ನೂ ಕಲ್ಪಿಸಲಾಗಿಲ್ಲ ಎಂದು ಸದಸ್ಯ ಉಸ್ಮಾನ್ ದೂರಿದರು.