ಬಂಟ್ವಾಳ, ಮಾ 18(DaijiworldNews/SM): ಜಗತ್ತು ಇಡೀ ಕೊರೊನೊ ವೈರಸ್ ನತ್ತ ನೋಡುತ್ತಿದ್ದು ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಬಂಟ್ವಾಳ ಪುರಸಭೆ ಮಾತ್ರ ಪೋಲೀಸ್ ಬಲ ಬಳಸಿ ಕಂಚಿನಡ್ಕ ಪದವಿನ ಸಂಸ್ಕರಣಾ ಘಟಕಕ್ಕೆ ತ್ಯಾಜ್ಯ ಹಾಕುವ ಮೂಲಕ ಬಾರೀ ವಿರೋಧಕ್ಕೆ ಗುರಿಯಾಯಿತು.
ಗ್ರಾಮಸ್ಥರ ಭಾರೀ ವಿರೋಧದ ನಡುವೆಯೂ ಸಜಿಪ ನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಡಂಪಿಂಗ್ ಯಾರ್ಡ್ ನಲ್ಲಿ ಬಂಟ್ವಾಳ ಪುರಸಭೆಯಿಂದ ಮಂಗಳವಾರ ಸಂಜೆ ತ್ಯಾಜ್ಯ ಹಾಕಲಾಗಿದ್ದು ಈ ವೇಳೆ ವಿರೋಧ ವ್ಯಕ್ತಪಡಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸೀರ್ ಸಹಿತ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ಪುರಸಭೆಯಿಂದ ಕಂಚಿನಡ್ಕ ಪದವಿನಲ್ಲಿ ಸುಮಾರು 15 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಡಂಪಿಂಗ್ ಯಾರ್ಡ್ ನಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಲು ಗ್ರಾಮಸ್ಥರು ವಿರೋಧಿಸುತ್ತಾ ಬಂದಿದ್ದಾರೆ. ಡಂಪಿಂಗ್ ಯಾರ್ಡ್ ಪರಿಸರದಲ್ಲಿ ಇರುವ ಮನೆಗಳನ್ನು, ಶಾಲೆ, ಅಂಗನವಾಡಿಯನ್ನು ತೆರವುಗೊಳಿಸಿ ಬೇರೆಡೆ ಪುನರ್ ವಸತಿ ಕಲ್ಪಿಸಿದ ಬಳಿಕ ತ್ಯಾಜ್ಯ ಸಂಸ್ಕರಣೆ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಕಂಚಿನಡ್ಕ ಪದವು ಡಂಪಿಂಗ್ ಯಾರ್ಡ್ ನಲ್ಲಿ ಪುರಸಭೆ ಹಲವು ಬಾರಿ ತ್ಯಾಜ್ಯ ವಿಲೇವಾರಿಗೆ ಪ್ರಯತ್ನಿಸಿತ್ತಾದರೂ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯರ ವಿರೋಧದಿಂದ ಅದು ವಿಫಲವಾಗಿತ್ತು. ಆದರೆ ಇತ್ತೀಚೆಗೆ ನಡೆದ ಸಭೆಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅವರು ಮಾ.16ರಿಂದಲೇ ಡಂಪಿಂಗ್ ಯಾರ್ಡ್ ನಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡುವಂತೆ ಪುರಸಭಾ ಅಧಿಕಾರಿಗಳಿಗೆ ಆದೇಶ ನೀಡಿದ್ದರು.
ಅದರಂತೆ ಯಾರ್ಡ್ ಗೆ ತ್ಯಾಜ್ಯ ಬಂದಿದ್ದು ಈ ವೇಳೆ ಡಂಪಿಂಗ್ ಯಾರ್ಡ್ ಗೇಟ್ ಎದುರು ತಡೆದ ಗ್ರಾಮಸ್ಥರನ್ನು ಚದುರಿಸಲು ಪೊಲೀಸರು ಮುಂದಾಗಿದ್ದು ಈ ವೇಳೆ ಪ್ರತಿರೋಧ ವ್ಯಕ್ತಪಡಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಸಹಿತ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋಮವಾರದಿಂದಲೇ ತ್ಯಾಜ್ಯ ಸಂಸ್ಕರಿಸಲು ಎ.ಸಿ.ಅದೇಶ ನೀಡಿದ್ದಲ್ಲದೆ, ಸೋಮವಾರದಿಂದ ಅಲ್ಲಿನ ಕಾಮಗಾರಿ ಆರಂಭಿಸಿಬೇಕು ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳಲು ತಿಳಿಸಿದ್ದರು.