ಮಂಗಳೂರು, ಮಾ 18(DaijiworldNews/SM): ಕೊರೊನಾ ಮಾರಣಾಂತಿಕ ಸೋಂಕಿನ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ, ತಪ್ಪು ಸಂದೇಶಗಳು ರವಾನೆಯಾಗುತ್ತಿವೆ. ತಪ್ಪು ಸಂದೇಶಗಳು ರವಾನಿಸುತ್ತಿರುವವರ ವಿರುದ್ಧ ಕ್ರಮಕ್ಕೆ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಮುಂದಾಗಿದೆ.
ಮಂಗಳೂರಿನಲ್ಲಿ ಇಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ತನಕ ಮನೆಯೊಳಗೆ ಇರಬೇಕು. ನಗರದಲ್ಲಿ ಕೊರೊನಾ ವೈರಸ್ ನಾಶಪಡಿಸಲು ಜೌಷಧಿ ಸಿಂಪಡನೆ ಮಾಡಲಾಗುತ್ತದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ತಪ್ಪು ಸಂದೇಶವಾಗಿದೆ. ಈ ಹಿನ್ನೆಲೆಯಲ್ಲಿ ನಕಲಿ ಸಂದೇಶಗಳನ್ನು ರವಾನಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ದಿನಾಂಕ 11-03-2020ರಂತೆ ಕೋವಿಡ್ 19 ಬಗ್ಗೆ ಯಾವುದೇ ವದಂತಿ, ತಪ್ಪು ಮಾಹಿತಿ ಹರಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದರಂತೆ, ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ 19 ಬಗ್ಗೆ ತಪ್ಪು ಮಾಹಿತಿ ಹರಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೊರೋನಾ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ, ಆತಂಕ ಉಂಟು ಮಾಡುವ ತಪ್ಪು ಮಾಹಿತಿ ಪ್ರಕಟಿಸಿದ ಕೆಲವು ವೆಬ್ ಸೈಟ್ ಗಳ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.