ಮಂಗಳೂರು, ಮಾ 18(DaijiworldNews/SM): ಮಾರ್ಚ್ 7ರಂದು ಮಂಗಳೂರಿಗೆ ಆಗಮಿಸಿದ ಪುತ್ತೂರಿನ ನಿವಾಸಿ ಇವರಿಗೆ ಉಸಿರಾಟದ ತೊಂದರೆ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ಪರೀಕ್ಷೆಯನ್ನು ಪುತ್ತೂರಿನಲ್ಲಿ ನಡೆಸಲಾಗಿದೆ. ಬಳಿಕ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ನಿಗಾದಲ್ಲಿರಿಸಲಾಗಿದೆ. ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಅವಶ್ಯಕ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಈ ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಈವರಿಗೆ 55,241 ಮನೆಗಳಿಗೆ ಭೇಟಿ ನೀಡಿ 2,12,639 ಮಂದಿಯನ್ನು ಸಂಪರ್ಕಿಸಿ ಆ ಮೂಲಕ ಜಾಗೃತಿಯನ್ನು ಮೂಡಿಸುವ ಕಾರ್ಯ ಮಾಡಲಾಗಿದೆ. ಹಾಗೂ ವಿದೇಶದಿಂದ ಬಂದ ಪ್ರಯಾಣಿಕರನ್ನು ಮನೆಯಲ್ಲಿಯೇ ಇರುವಂತೆ ಮಾಹಿತಿ ನೀಡಲಾಗಿದೆ.
ಮಂಗಳೂರು ವಿಮಾನ ನಿಲ್ದಾಣ ಹೊರತುಪಡಿಸಿ ಇತರ ಮಾರ್ಗದಿಂದ ವಿದೇಶದಿಂದ ಆಗಮಿಸಿ ಜಿಲ್ಲೆಯಲ್ಲಿ ವಾಸ್ತವ್ಯವಿರುವವರನ್ನು ಮನೆಯಲ್ಲಿಯೇ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಇಂದಿನಿಂದ ದುಬಾಯಿಯಿಂದ ಆಗಮಿಸುವವರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ರೈಲ್ವೇ ನಿಲ್ದಾಣಗಳಲ್ಲೂ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರಲ್ಲಿ ಜನಜಾಗೃತಿ ಮಾಡಿಸುವ ಬಗ್ಗೆ ಸ್ಥಳೀಯ ಟಿ.ವಿ. ಮಾಧ್ಯಮದಲ್ಲಿ 7 ಕಾರ್ಯಕ್ರಮಗಳನ್ನು ಮತ್ತು ಸ್ಥಳೀಯ ರೇಡಿಯೋದಲ್ಲಿ 3 ಕಾರ್ಯಕ್ರಮಗಳನ್ನು ನೀಡಲಾಗಿದೆ.