ಮಂಗಳೂರು, ಮಾ 18(DaijiworldNews/SM): ಮಂಗಳೂರು ಧರ್ಮಪ್ರಾಂತ್ಯಕ್ಕೆ ಒಳಪಡುವ ಎಲ್ಲಾ ಚರ್ಚ್ ಗಳಲ್ಲಿ ನಿಗದಿತ ಸಮಯದಲ್ಲಿ ನಡೆಯುವ ಎಲ್ಲಾ ಬಲಿಪೂಜೆಗಳನ್ನು ಮಾರ್ಚ್ 31ರ ತನಕ ರದ್ದುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಸರಕಾರದ ಆದೇಶದಂತೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನಾ ಆದೇಶ ನೀಡಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯಾದ್ಯಂತ ಸಭೆ, ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಜಿಲ್ಲಾಧಿಕಾರಿಗಳು ಸೆಕ್ಷನ್ 144(3)ರ ಪ್ರಕಾರ ಗುಂಪು ಸೇರದಂತೆ ಆದೇಶವನ್ನು ಜಾರಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಧರ್ಮ ಪ್ರಾಂತ್ಯಕ್ಕೆ ಒಳಪಡುವ ಎಲ್ಲಾ ಚರ್ಚ್ ಗಳಲ್ಲಿ ಬಲಿಪೂಜೆಗಳನ್ನು ರದ್ದುಗೊಳಿಸಿ ಬಿಷಪ್ ಆದೇಶ ನೀಡಿದ್ದಾರೆ.
ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಆದೇಶದ ಪ್ರಕಾರ ಮಾರ್ಚ್ 22 ಹಾಗೂ 29ರ ಭಾನುವಾರಗಳಂದು ಧರ್ಮಪ್ರಾಂತ್ಯಕ್ಕೆ ಒಳಪಡುವ ಯಾವುದೇ ಚರ್ಚ್ ಗಳಲ್ಲೂ ಬಲಿಪೂಜೆಗಳು ನಡೆಯುವುದಿಲ್ಲ. ಅಲ್ಲದೆ, ವಾರದ ಮಧ್ಯೆ ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ವೇಳೆ ನಡೆಯುವ ಬಲಿಪೂಜೆಗಳಿಗೂ ಬ್ರೇಕ್ ಹಾಕಲಾಗಿದೆ.
ಈ ನಡುವೆ ಕೆಲವು ಚರ್ಚ್ ಗಳಲ್ಲಿ ದ್ಯಾನಕೂಟಗಳನ್ನೂ ಕೂಡ ಆಯೋಜನೆ ಮಾಡಲಾಗಿದೆ. ಅವುಗಳಿಗೂ ಕೂಡ ನಿಷೇಧ ಹೇರಲಾಗಿದೆ. ಜನ ಸೇರುವ ಯಾವುದೇ ಕಾರ್ಯಗಳಿಗೂ ಅವಕಾಶವಿಲ್ಲ ಎಂಬುವುದಾಗಿ ಧರ್ಮಾಧ್ಯಕ್ಷರು ಆದೇಶ ಹೊರಡಿಸಿದ್ದಾರೆ.