ಕುಂದಾಪುರ,ಮಾ 19 ( Daijiworld News/MSP): ಇತ್ತಿಚೇಗೆ ಕುಂದಾಪುರದ ಮಿನಿ ವಿಧಾನ ಸೌಧದಲ್ಲಿ ಪಾಕಿಸ್ಥಾನದ ಪರ ಘೋಷಣೆ ಕೂಗಿದ್ದ ಆರೋಪಿ, ಕೋಡಿ ನಿವಾಸಿ ರಾಘವೇಂದ್ರ ಗಾಣಿಗನಿಗೆ ಜಾಮೀನು ನೀಡಲು ನಿರಾಕರಿಸಿರುವ ನ್ಯಾಯಾಲಯವು ಆತನನ್ನು ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲಿಸುವಂತೆ ಆದೇಶಿದೆ.
ಜೆಎಂಎಫ್ ಸಿ 1ನೇ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಮಾನಸಿಕವಾಗಿ ಅಸ್ವಸ್ಥನಾಗಿರುವ ಕಾರಣ ಆತನಿಗೆ ಜಾಮೀನು ನೀಡಬೇಕು ಎಂದು ಆರೋಪಿ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ಸಲ್ಲಿಸಿದ ಸರಕಾರ್ ಅಭಿಯೋಜಕಿ ಸುಮಂಗಲಾ ನಾಯ್ಕ್ ಇದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಯಾಗುವ ಪ್ರಕರಣ. ಆದ್ದರಿಂದ ಇಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ. ಆರೋಪಿ ಮೇಲಿನ ಆರೋಪ ಗಂಭೀರವಾದದ್ದು. ಜಿಲ್ಲಾ ವೈದ್ಯರಿಂದ ಬಂದ ವರದಿ ಮೇಲೆ ಈ ಹಂತದಲ್ಲಿ ಜಾಂಮೀನು ನೀಡಲು ಸಾಧ್ಯವಿಲ್ಲ.ಅದೊಂದನ್ನೇ ಆಧಾರವಾಗಿಡುವ ಬದಲು ವರದಿ ನೀಡಿದ ವೈದ್ಯಾಧಿಕಾರಿಯನ್ನು ವಿಚಾರಣೆ ನಡೆಸಬೇಕು,ಅದರ ಹೊರತಾಗಿ ಜಾಮೀನು ನೀಡುವಂತಿಲ್ಲ ಎಂದು ವಾದ ಮಂಡಿಸಿದರು.
ಬಳಿಕ ನ್ಯಾಯಾಲಯ ಜಾಮೀನು ತಿರಸ್ಕರಿಸಿ ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲಿಸುವಂತೆ ಆದೇಶ ಮಾಡಿದೆ.