ಮಂಗಳೂರು, ಮಾ 19 ( Daijiworld News/MSP): ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಬೆರಳಚ್ಚು ಬಯೋಮೆಟ್ರಿಕ್ ಬದಲಿಗೆ ಆಧಾರ್ ಆಧರಿತ ಮೊಬೈಲ್ ಒಟಿಪಿ ಮೂಲಕ ಪಡಿತರ ವಿತರಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಚಿಸಿದೆ.
ಬುಧವಾರದಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ಇದು ಮುಂದಿನ ಆದೇಶದವರ್ಗೆ ಜಾರಿಯಲ್ಲಿರುತ್ತದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಆನ್ಲೈನ್ ಮೂಲಕ ಫಲಾನುಭವಿಗಳ ಬೆರಳಚ್ಚು ಪಡೆದು ಪಡಿತರ ವಿತರಿಸುತ್ತಿದ್ದು, ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಬಯೋಮೆಟ್ರಿಕ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಹೀಗಾಗಿ ಪಡಿತರ ಪಡೆಯಲು ಬರುವವರು ಆಹಾರ ಇಲಾಖೆಯಲ್ಲಿ ನೋಂದಣಿಯಾಗಿರುವ ತಮ್ಮ ದೂರವಾಣಿ ಸಂಖ್ಯೆ ಇರುವ ಮೊಬೈಲ್ ಪೋನ್ ನನ್ನು ತೆಗೆದುಕೊಂಡುಬರಬೇಕು. ಆಧಾರ್ ನಲ್ಲಿ ಮೊಬೈಲ್ ನೋಂದಣಿ ಆಗಿಲ್ಲದಿದ್ದರೆ ಬಯೋಮೆಟ್ರಿಕ್ ಬಳಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.