ಮಂಗಳೂರು, ಮಾ.19 (DaijiworldNews/PY) : ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ 94 ಸಿಸಿ ಯೋಜನೆಯ ಲಾಭ ಪಡೆದ ಇಬ್ಬರ ವಿರುದ್ದ ಹಾಗೂ ಕೃತ್ಯಕ್ಕೆ ಸಹಕರಿಸಿದ ಸರ್ಕಾರಿ ಅಧಿಕಾರಿಗಳಿಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ. ದ.ಕ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ ತನಿಖೆಯಲ್ಲಿ ಸರ್ಕಾರಿ ಯೋಜನೆಯನ್ನು ದುರುಪಯೋಗಪಡಿಸಿಕೊಂಡಿರುವುದು ಸಾಬೀತಾಗಿದ್ದು, ಈ ಹಿನ್ನಲೆಯಲ್ಲಿ ನಕಲಿ ದಾಖಲೆಗಳ ಆಧಾರದ ಮೇಲೆ ಸರ್ಕಾರದ 94 ಸಿಸಿ ಯೋಜನೆಯ ಅಕ್ರಮ ಲಾಭ ಪಡೆಯಲು ಸಹಕರಿಸಿದ ಸರ್ಕಾರಿ ಅಧಿಕಾರಿಗಳಾದ ಮಂಗಳೂರು ತಾಲೂಕಿನ ತಹಶೀಲ್ದಾರರಾದ ಗುರುಪ್ರಸಾದ್, ಮಂಗಳೂರು ಕಂದಾಯ ನಿರೀಕ್ಷಕರಾದ ಜೋಸೆಫ್ ವಾಲ್ಗಟ್ ಪಿರೇರಾ ಹಾಗೂ ಅಕ್ರಮ ಲಾಭ ಪಡೆದ ಸೌಮ್ಯ ಆರ್.ಎನ್ ಹಾಗೂ ಪ್ರೀತಿ ಡಿನ್ನಾ ಪಿರೇರಾ ಇವರಿಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಮಂಗಳೂರು ತಾಲೂಕಿನ ಸೌಮ್ಯ ಆರ್.ಎನ್ ಹಾಗೂ ಪ್ರೀತಿ ಡಿನ್ನಾ ಪಿರೇರಾ ಅವರು ಮಂಗಳೂರು ಕೋಡಿಯಾಲ್ ಬೈಲ್ನಲ್ಲಿ ಅಧೀಕೃತವಾಗಿ ಯಾವುದೇ ಮನೆ ಹೊಂದಿರದೇ ಇದ್ದರೂ ಸಹ ದಿನಾಂಕ 2012ರ ಜನವರಿ 1ರ ಮೊದಲೇ ಸ್ಥಳದಲ್ಲಿ ವಾಸದ ಮನೆ ಕಟ್ಟಿಕೊಂಡು ವಾಸವಿರುವುದಾಗಿ ನಕಲಿ ದಾಖಲೆ ಸೃಷ್ಠಿಸಿ ಸರ್ಕಾರದ 94 ಸಿಸಿ ಯೋಜನೆಯಡಿಯಲ್ಲಿ ಅಕ್ರಮವಾಗಿ ಹಕ್ಕುಪತ್ರವನ್ನು ಮಂಜೂರು ಮಾಡಿಸಿಕೊಂಡಿದ್ದು, 2018ರಲ್ಲಿ ಸೌಮ್ಯ ಆರ್. ಎನ್ ಅವರು ಬ್ಯಾಂಕಿನಿಂದ ಸಾಲ ಪಡೆದು ಹೊಸದಾಗಿ ಮನೆಯನ್ನು ನಿರ್ಮಿಸಿದ್ದಾರೆ. ಅದೇ ಸರ್ವೇ ನಂಬರ್ ಸ್ಥಳದಲ್ಲಿ ಯಾವುದೇ ಮನೆಯನ್ನು ಹೊಂದಿರದೇ ಇದ್ದರೂ ಸಹ ಪ್ರೀತಿ ಡಿನ್ನಾ ಪಿರೇರಾ ಎಂಬವರು ಸಲ್ಲಿಸಿದ ನಕಲಿ ದಾಖಲೆಗಳ ಆಧಾರದ ಮೇಲೆ ಸರ್ಕಾರದ 94 ಸಿಸಿ ಯೋಜನೆಯ ಅಕ್ರಮ ಲಾಭ ಪಡೆಯಲು ಸಹಕರಿಸಿದ ಸರ್ಕಾರಿ ಅಧಿಕಾರಿಗಳಾದ ಮಂಗಳೂರು ತಾಲೂಕಿನ ತಹಶೀಲ್ದಾರರಾದ ಗುರುಪ್ರಸಾದ್, ಮಂಗಳೂರು ಕಂದಾಯ ನಿರೀಕ್ಷಕರಾದ ಜೋಸೆಫ್ ವಾಲ್ಗಟ್ ಪಿರೇರಾ ಅವರು ಸೌಮ್ಯ ಆರ್.ಎನ್ ಹಾಗೂ ಅವರ ಪತಿ ರಮೇಶ್ ಅವರಿಗೆ ತಮ್ಮ ಕುಟುಂಬಗಳಿಗೆ ಸೇರಿದ ಒಟ್ಟು 08 ಸದಸ್ಯರಿಗೆ 94 ಸಿಸಿ ಯೋಜನೆಯ ಹಕ್ಕುಪತ್ರ ಮಂಜೂರು ಮಾಡಿ ಅಕ್ರಮ ಲಾಭವನ್ನು ಗಳಿಸಲು ಸಹಕರಿಸಿದ್ದಾರೆ.
ಈ ಪ್ರಕರಣದ ವಿಚಾರವಾಗಿ, ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಅಧೀಕ್ಷಕ, ಭ್ರಷ್ಟಾಚಾರ ನಿಗ್ರಹ ದಳದ ಮಂಜುನಾಥ ಕವರಿ, ದ.ಕ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಪೊಲೀಸ್ ನಿರೀಕ್ಷರಾದ ಯೋಗೀಶ್ ಕುಮಾರ್ ಬಿ.ಸಿ ಅವರು ಪ್ರಕರಣ ತನಿಖೆ ನಡೆಸಿದ್ದು, ತನಿಖೆ ಮುಂದುವರೆದಿದೆ.