ಮಂಗಳೂರು, ಫೆ 21 : ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳಿ ಬರುತ್ತಿದ್ದ ತಂಡದ ಮೇಲೆ ಇನ್ನೊಂದು ತಂಡವು ಕಸಬ ಬೆಂಗ್ರೆಯಲ್ಲಿ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಶಾಸಕ ಜೆ ಆರ್ ಲೋಬೋ ಹೇಳಿದ್ದಾರೆ. ಫೆ 21ರ ಬೆಳಿಗ್ಗೆ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಗಲಭೆ ನಡೆದ ಸ್ಥಳಕ್ಕೆ ಇಂದು ಮುಂಜಾನೆ ನಾನು ತೆರಳಿ ಮಾತುಕತೆ ನಡೆಸಿದ್ದೇನೆ. ಇತ್ತಂಡಗಳ ನಾಯಕರನ್ನು ಕರೆಸಿ ಮಾತುಕತೆ ನಡೆಸಿ ವಿವಾದ ಬಗೆಹರಿಸಲಾಗಿದೆ. ಶೀಘ್ರವೇ ಶಾಂತಿ ಸಭೆ ನಡೆಸಲಾಗುವುದು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಪೊಲೀಸರು ಬಿಗು ಭದ್ರತೆ ಕೈಗೊಂಡಿದ್ದಾರೆ ಎಂದರು.