ಮಂಗಳೂರು, ಮಾ 19 ( Daijiworld News/MSP): ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್ನಲ್ಲಿ ಇಬ್ಬರು ಯುವಕರು ಮೃತಪಟ್ಟ ಪ್ರಕರಣದ ವಿಚಾರಣೆಗೆ ದ.ಕನ್ನಡದ ಜಿಲ್ಲಾಧಿಕಾರಿ, ಮಂಗಳೂರು ಸಹಾಯ ಆಯುಕ್ತ (ಎಸಿ),ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಖುದ್ದು ಹಾಜರಾಗುವಂತೆ ಉಡುಪಿ ಜಿಲ್ಲಾಧಿಕಾರಿಯಾಗಿರುವ ಜಗದೀಶ್ ತನಿಖಾಧಿಕಾರಿಯಾಗಿರುವ ನೊಟೀಸ್ ಜಾರಿಗೊಳಿಸಿದ್ದಾರೆ.
ಮಂಗಳೂರು ಗೋಲಿಬಾರ್ ಪ್ರಕರಣದ ಕುರಿತು ಮ್ಯಾಜಿಸ್ಟ್ರಿಯಲ್ ಕೋರ್ಟ್ನಲ್ಲೂ ತನಿಖೆ ನಡೆಯುತ್ತಿದ್ದು, ಮಾ. 23 ರಂದು ತನಿಖಾಧಿಕಾರಿಗಳ ಮುಂದೆ ದ,ಕ ಜಿಲ್ಲಾಧಿಕಾರಿ ಸಿಂದೂ ರೂಪೇಶ್ ಸಹಿತ ಮಂಗಳೂರು ಎಸಿ ಹಾಗೂ ಗೋಲಿಬಾರ್ ನಲ್ಲಿ ಮೃತಪಟ್ಟ ಯುವಕರ ಪೋಸ್ಟ್ಮಾರ್ಟ್ಂ ನಡೆಸಿದ ವೈದ್ಯರು ವಿಚಾರಣೆಗೆ ಹಾಜರಾಗಬೇಕಿದೆ.
ಗುರುವಾರವೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಮಿನಿ ವಿಧಾನ ಸೌಧ ಸಹಾಯಕ ಆಯುಕ್ತರ ಕಚೇರಿಯಲ್ಲಿ ವಿಚಾರಣೆ ಮುಂದುವರಿದಿದ್ದು, 29 ಪೊಲೀಸರು ಮತ್ತು 6 ಸಾರ್ವಜನಿಕರ ಸಹಿತ 35 ಮಂದಿ ಸಾಕ್ಷ್ಯ ಸಹಿತ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.
ತನಿಖಾಧಿಕಾರಿ ತನಿಖೆಗೆ ಕಾಲಾವಕಾಶ ಕೇಳಿದ್ದ ಹಿನ್ನಲೆಯಲ್ಲಿ ಅಂತಿಮ ವರದಿ ಸಲ್ಲಿಸಲು ಸರ್ಕಾರ ಎಪ್ರಿಲ್ 23ರವರೆಗೆ ಅವಕಾಶ ನೀಡಿದೆ. ಇನ್ನು ಈ ಬಗ್ಗೆ ಪ್ರಕರಣದ ತನಿಖೆಗೆ ಸಂಬಂಧಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತನಿಖಾಧಿಕಾರಿ ಜಿ. ಜಗದೀಶ್, " ಸಾರ್ವಜನಿಕ ಹೇಳಿಕೆಗೆ ಅಂತಿಮ ಅವಕಾಶ ನೀಡಲು ನಿರ್ಧರಿಸಲಾಗಿದ್ದು , ಹೈಕೋರ್ಟ್ ಅಂತಿಮ ವರದಿ ಸಲ್ಲಿಸಲು ಏ. 21 ಕ್ಕೆ ಆದೇಶ ನೀಡಿದೆ. ಈ ಹಿನ್ನಲೆಯಲ್ಲಿ ಅದಕ್ಕೂ ಮೊದಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು" ಎಂದು ತಿಳಿಸಿದ್ದಾರೆ.
ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದಂತೆಯೇ ರಾಜ್ಯದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ಕರ್ಫ್ಯೂ ಜಾರಿ ಮಾಡಲಾಗಿತ್ತು. ಈ ವೇಳೆ ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ಬಲಿಯಾಗಿದ್ದರು.