ಬೆಂಗಳೂರು, ಫೆ 21 : ಮೆಟ್ರೋ ನಗರಿಯಲ್ಲಿ ಹಾಡು ಹಗಲೇ ಬಿಎಂಟಿಸಿ ಬಸ್ ಒಳಗೆ ನುಗ್ಗಿ ಬರ್ಬರವಾಗಿ ಇರಿದು ವ್ಯಕ್ತಿಯೊಬ್ಬನನ್ನು ಕೊಲೆಗೈದ ಘಟನೆ ನಡೆದಿದೆ. ಘಟನೆಯ ಬಳಿಕ ಮೂವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅತ್ತಿಬೆಲೆಯಿಂದ ಬೆಂಗಳೂರು ನಗರಕ್ಕೆ ಬರುತ್ತಿದ್ದ ಬಸ್ಸನ್ನು ಚಂದಾಪುರದಿಂದ ಬೆಂಬತ್ತಿದ ಮೂವರು ಇಲೆಕ್ಟ್ರಾನಿಕ್ ಸಿಟಿಯ ಕೋನಪ್ಪನ ಅಗ್ರಹಾರ ಬಳಿ ಬಸ್ ನಿಲ್ಲುತ್ತಿದ್ದಂತೆ ಒಳ ನುಗ್ಗಿದ ಮೂವರು ದುಷ್ಕರ್ಮಿಗಳು ಆಂಧ್ರ ಮೂಲದ 35 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಇರಿದು ಕೊಲೆಗೈದು ಪರಾರಿಯಾಗಿದ್ದಾರೆ. ಇರಿತಕ್ಕೊಳಗಾದ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಭೀಕರ ದೃಶ್ಯವನ್ನು ಕಂಡ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ಮಹಿಳೆಯೊಂದಿಗೆ ಅಕ್ರಮ ಸಂಬಂಧವೇ ಈ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದ್ದರೂ, ನಿಖರ ಕಾರಣ ತಿಳಿದುಬಂದಿಲ್ಲ.ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.