ನೆಲ್ಯಾಡಿ, ಮಾ.19 (DaijiworldNews/PY) : ಟಿಪ್ಪರ್ ಲಾರಿಯೊಂದರ ಮೇಲೆ ಕಂಟೈನರ್ ಲಾರಿಯೊಂದು ಮಗುಚಿ ಬಿದ್ದ ಪರಿಣಾಮ ಕಂಟೈನರ್ ಲಾರಿ ಚಾಲಕ ಗಂಭೀರ ಗಾಯಗೊಂಡ ಘಟನೆ ಮಾ.19 ಗುರುವಾರದಂದು ಮಧ್ಯಾಹ್ನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟುನಲ್ಲಿ ನಡೆದಿದೆ.
ಟಿಪ್ಪರ್ ಚಾಲಕ ಟಿಪ್ಪರನ್ನು ಹೆದ್ದಾರಿ ಬದಿ ನಿಲ್ಲಿಸಿ ಊಟಕ್ಕೆ ಹೋಗಿದ್ದು ಈ ವೇಳೆ ಹಾಸನ ಕಡೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಟಿಪ್ಪರ್ ಮೇಲೆಯೇ ಪಲ್ಟಿಯಾಗಿದೆ. ಘಟನೆಯಲ್ಲಿ ಕಂಟೈನರ್ ಚಾಲಕ ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ. ಕಂಟೈನರ್ ಪಲ್ಟಿಯಾದ ಪರಿಣಾಮ ವಿದ್ಯುತ್ ಕಂಬವೊಂದಕ್ಕೆ ಹಾನಿಯಾಗಿದೆ. ಕೂಡಲೇ ಪವರ್ ಮ್ಯಾನ್ಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹೆಚ್ಚಿನ ಅನಾಹುತ ಆಗದಂತೆ ಮುನ್ನೆಚ್ಚರಿಕೆ ಕೈಗೊಂಡರು.