ಮಂಗಳೂರು, ಫೆ 21: ನಗರದ ಸುರತ್ಕಲ್ ದೊಡ್ಡ ಕೊಪ್ಲ ಕಡಲ ತೀರದಲ್ಲಿ ಬೃಹತ್ ಗಾತ್ರದ ತಿಮಿಂಗಿಲದ ಮೃತದೇಹ ಪತ್ತೆಯಾಗಿದೆ.
ಕರಾವಳಿ ಸಮುದ್ರದ ಕಡಲ ತೀರದಲ್ಲಿ ದೊಡ್ಡ ಗಾತ್ರದ ತಿಮಿಂಗಿಲಗಳಿದ್ದರೂ ಜನರ ಕಣ್ಣಿಗೆ ಕಾಣ ಸಿಗುವುದು ಅಪರೂಪ. ಆದರೆ ಮುಂಜಾನೆ ವೇಳೆ ವಾಯುವಿಹಾರಕ್ಕೆ ಸಮುದ್ರದ ದಡಕ್ಕೆ ಹೋದ ಪ್ರವಾಸಿಗರಿಗೆ ಮೃತ ತಿಮಿಂಗಿಲ ಕಾಣಸಿಕ್ಕಿದೆ.
ತಿಮಿಂಗಿಲ ಮೃತಪಟ್ಟು ಕೆಲ ದಿನಗಳ ಬಳಿಕ ಸುರತ್ಕಲ್ ದೊಡ್ಡ ಕೊಪ್ಲ ಕಡಲ ದಡ ಸೇರಿದೆ. ತಿಮಿಂಗಿಲವನ್ನ ನೋಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಕಡಲ ತೀರಕ್ಕೆ ಬರುತ್ತಿದ್ದಾರೆ.
ಮೃತದೇಹ ಕೊಳೆತು ನಾರುತ್ತಿದ್ದು ಮಹಾನಗರ ಪಾಲಿಕೆ ಮಣ್ಣು ಮಾಡಲಿದೆ. ಇದಾಗಿ ಒಂದು ತಿಂಗಳ ಬಳಿಕ ಪಣಂಬೂರು ಬೀಚ್ ಅಭಿವೃದ್ಧಿ ಮಂಡಳಿ ತಿಮಿಂಗಿಲದ ಅಸ್ಥಿಪಂಜರವನ್ನು ಹೊರ ತೆಗೆದು ವಸ್ತು ಸಂಗ್ರಹಾಲಯಕ್ಕೆ ನೀಡಲು ತೀರ್ಮಾನಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.