ಮಂಗಳೂರು, ಮಾ 19 ( Daijiworld News/MSP): ನೆರೆ ಜಿಲ್ಲೆಗಳಾದ ಕೊಡಗು, ಕಾಸರಗೋಡಿನಲ್ಲಿ ಕೊರೊನ ಸೋಂಕಿತರು ಕಂಡು ಬಂದ ಹಿನ್ನಲೆಯಲ್ಲಿ ಜಿಲ್ಲೆಯೂ ಹೈ ಅಲರ್ಟ್ ನಲ್ಲಿದ್ದು, ಸುಳ್ಯ ಹಾಗೂ ಕರ್ನಾಟಕ- ಕೇರಳ ಗಡಿಭಾಗದಲ್ಲಿ ಹೆಚ್ವಿನ ತಪಾಸಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ, ಕೊಡಗು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಗುರುವಾರ ಕಂಡುಬಂದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ-ಕೊಡಗು ಗಡಿಭಾಗದಲ್ಲಿ ಹೆಚ್ವಿನ ತಪಾಸಣೆ ನಡೆಸಲಾಗುತ್ತಿದ್ದು ಅದರಲ್ಲೂ ಸುಳ್ಯದಲ್ಲಿ ಸರ್ವೆಲೆನ್ಸ್ ನ್ನು ತೀವ್ರಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೊರೊನಾ ಹಿನ್ನಲೆಯಲ್ಲಿ ತಪಾಸಣೆ ತೀವ್ರಗೊಳಿಸಿದ್ದು ವಿದೇಶದಿಂದ ಬಂದವರನ್ನು ವಿಮಾನ ನಿಲ್ದಾಣದಲ್ಲಿ ಎ ಬಿ ಸಿ ಕ್ಯಾಟಗೆರಿ ಆಗಿ ವಿಂಗಡನೆ ಮಾಡಲಾಗುತ್ತಿದೆ.
ಥರ್ಮಲ್ ಸ್ಕಾನ್ ನಲ್ಲಿ ಸೋಂಕಿನ ಲಕ್ಷಣ ಇದ್ದವರು ಎ ಕ್ಯಾಟಗೆರಿಗೆ ಸೇರಿಸಲಾಗುತ್ತಿದೆ. ಇನ್ನು 65 ವರ್ಷ ಮೇಲ್ಪಟ್ಟವರು, ಬಿಪಿ, ಶುಗರ್ ಸಮಸ್ಯೆ ಇದ್ದ ಹಾಗೂ ಅರೋಗ್ಯ ಸಮಸ್ಯೆ ಇದ್ದವರನ್ನು ಬಿ ಕ್ಯಾಟಗೆರಿಗೆ ಹಾಗೂ ಯಾವುದೇ ಲಕ್ಷಣ ಹೊಂದಿಲ್ಲದ ಆರೋಗ್ಯವಂತರು ಸಿ ಕ್ಯಾಟಗೆರಿ ಎಂದು ವಿಂಗಡಿಸಲಾಗುತ್ತದೆ.
ಎ ಕ್ಯಾಟಗೆರಿಯುಳ್ಳ ಪ್ರಯಾಣಿಕರನ್ನು ನೇರವಾಗಿ ಆಸ್ಪತ್ರೆ ರವಾನಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು, ಬಿ ಕ್ಯಾಟಗೆರಿಯುಳ್ಳವರನ್ನು ಸರ್ಕಾರಿ ಕ್ವಾರಂಟೈನ್ ಸೆಂಟರ್ ಗಳಿಗೆ ಹಾಗೂ ಸಿ ಕ್ಯಾಟಗೆರಿಯವರು ಹೋಮ್ ಕ್ವಾರಂಟೈನ್ ಗೆ ರವಾನೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಹೇಳಿದ್ದಾರೆ.