ಮಂಗಳೂರು, ಮಾ 19 ( Daijiworld News/MSP): ಕೊರೊನಾ ಸೋಂಕು ಹರಡದಂತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕೈಗೆ ಮುದ್ರೆ ಹಾಕುವ ಪ್ರಕ್ರಿಯೆ ಗುರುವಾರದಿಂದ ಆರಂಭವಾಗಿದೆ.
ವಿದೇಶದಿಂದ ಮಂಗಳೂರಿಗೆ ಆಗಮಿಸುತ್ತಿರುವ ಪ್ರಯಾಣಿಕರನ್ನು 14 ದಿನಗಳ ಕಾಲ ಪ್ರತ್ಯೇಕವಾಗಿರುವ ನಿಟ್ಟಿನಲ್ಲಿ ಗುರುತಿಗಾಗಿ ಕೈ ಮೇಲೆ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ. ಪ್ರಯಾಣಿಕರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ವಿದೇಶದಿಂದ ಬಂದ ಪ್ರಯಾಣಿಕರು ಸ್ವನಿರ್ಬಂಧ ಹೇರಿಕೊಳ್ಳಲು ಸೂಚಿಸಲಾಗಿದ್ದು ಕೈ ಮೇಲೆ ಕ್ವಾರಂಟೈನ್ ಸ್ಟಾಂಪ್ ಹಾಕಲಾಗುತ್ತಿದೆ. ಮತದಾನದ ವೇಳೆ ಬೆರಳಿಗೆ ಗುರುತು ಹಾಕುವ ಅಳಿಸಲಾಗದ ಶಾಯಿ ಮೂಲದ ಮುದ್ರೆ ಹಾಕಲಾಗುತ್ತಿದೆ ಎಂದು ತಿಳಿದುಬಂದಿದೆ.
ವಿದೇಶದಿಂದ ಆಗಮಿಸುತ್ತಿರುವ ಪ್ರಯಾಣಿಕರನ್ನು ಹೀಗೆ ಪ್ರತ್ಯೇಕವಾಗಿಡುವ ಮೂಲಕ ಸೋಂಕು ಹರಡದಂತೆ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವುದು ಸರ್ಕಾರ ಚಿಂತನೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಅನುಕೂಲವಾಗಲಿದೆ.
ಇದರೊಂದಿಗೆ ವಿದೇಶದಿಂದ ಬಂದ ಪ್ರಯಾಣಿಗರನ್ನು ಎ,ಬಿ,ಸಿ ಕ್ಯಾಟಗೆರಿಯಲ್ಲಿ ವಿಂಗಡಿಸಲಾಗುತ್ತಿದೆ. ಎ ಕ್ಯಾಟಗೆರಿಯುಳ್ಳ ಪ್ರಯಾಣಿಕರನ್ನು ನೇರವಾಗಿ ಆಸ್ಪತ್ರೆ ರವಾನಿಸಿ ಅವರಿಗೆ ಸೂಕ್ತ ಚಿಕಿತ್ಸೆ , ಬಿ ಕ್ಯಾಟಗೆರಿಯುಳ್ಳವರನ್ನು ಸರ್ಕಾರಿ ಕ್ವಾರಂಟೈನ್ ಸೆಂಟರ್ ಗಳಿಗೆ ಹಾಗೂ ಸಿ ಕ್ಯಾಟಗೆರಿಯವರು ಹೋಮ್ ಕ್ವಾರಂಟೈನ್ ಗೆ ರವಾನೆ ಮಾಡಲಾಗುತ್ತದೆ.