ಮಂಗಳೂರು, ಮಾ.19 (DaijiworldNews/PY) : ಕೊರೊನಾ ವೈರಸ್ ಎಲ್ಲೆಡೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಮಾ.18ರಿಂದ ಜಾರಿಗೆ ಬರುವಂತೆ ಜಿಲ್ಲೆಯಾದ್ಯಂತ ಸೆಕ್ಷನ್ 144(3) ಜಾರಿಗೊಳಿಸಿರುವುದರಿಂದ ಮಾರಿಪೂಜೆಯ ಎಲ್ಲಾ ಜಾತ್ರಾ ಸಂಭ್ರಮವನ್ನು ರದ್ದುಗೊಳಿಸಲು ಮೂರೂ ಮಾರಿಗುಡಿಗಳ ಆಡಳಿತ ಮಂಡಳಿಗಳು ಬುಧವಾರ ಕಾಪು ತಹಶೀಲ್ದಾರ್ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಒಪ್ಪಿಗೆ ಸೂಚಿಸಿವೆ.
ಕಾಪುವಿನ ಮೂರು ಮಾರಿಗುಡಿಗಳಲ್ಲಿಯೂ ಜರುಗುವ ತುಳುನಾಡಿನ ಏಳು ಪ್ರಸಿದ್ದ ಜಾತ್ರೆಗಳಲ್ಲಿ ಒಂದಾಗಿರುವ ಸುಗ್ಗಿ ಮಾರಿಪೂಜೆಯು ಹಳೇ ಮಾರಿಗುಡಿ, ಹೊಸ ಮಾರಿಗುಡಿ ಹಾಗೂ ಮೂರನೇ ಮಾರಿಗುಡಿಯಲ್ಲಿ ಪ್ರತೀ ವರ್ಷ ನಡೆಯುವ ಕಾಲಾವಧಿ ಸುಗ್ಗಿ ಮಾರಿಪೂಜೆಯು ಈ ವರ್ಷ ಮಾ.24 ಹಾಗೂ 25ರಂದು ನಿಗದಿಯಾಗಿತ್ತು.
ಮಾರಿಪೂಜೆಯ ಧಾರ್ಮಿಕ ವಿಧಾನಗಳನ್ನು ಸಂಪ್ರದಾಯ ಬದ್ದವಾಗಿ ನಡೆಸಲೇ ಬೇಕಾಗಿದ್ದು, ಭಕ್ತಾದಿಗಳ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯುವ ವೈಭವದ ಜಾತ್ರೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದ್ದು, ಯಾವುದೇ ಸಂಭ್ರಮವಿಲ್ಲದೇ ಸರಳ ರೀತಿಯಲ್ಲಿ ಆಚರಿಸಲಾಗುವುದು ಎಂದು ಹಳೇ ಮಾರಿಗುಡಿ, ಹೊಸ ಮಾರಿಗುಡಿ ಹಾಗೂ ಮೂರನೇ ಮಾರಿಗುಡಿಯ ಆಡಳಿತ ಮಂಡಳಿ ತಿಳಿಸಿದೆ.