ಉಡುಪಿ, ಮಾ 19 (DaijiworldNews/SM): ಸರ್ಕಾರಿ ಕಚೇರಿಗಳಿಗೆ ತುರ್ತು ಕೆಲಸವಿಲ್ಲದೆ ಸಾರ್ವಜನಿಕರು ಬರುವಂತಿಲ್ಲ. ಫೋನ್ ಮೂಲಕ ತಮ್ಮ ಕೆಲಸದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ.
ಈಗಾಗಲೇ ಕೊರೋನ ಮುನ್ನಚ್ಚೆರಿಕೆ ಮತ್ತು ಸೌಲಭ್ಯ ಒದಗಿಸಲು ಸರಕಾರದಿಂದ 30 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು, ಜಿಲ್ಲಾ ಮಟ್ಟದಲ್ಲಿ ಮಾನಿಟರಿಂಗ್ ಸಮಿತಿ ರಚನೆಯಾಗಿದೆ. ಅಲ್ಲದೆ ತಾಲೂಕು ಮಟ್ಟದಲ್ಲಿಯೂ ತಹಶೀಲ್ದಾರ್, ಬಿಇಓ ಇತರ ಅಧಿಕಾರಿಗಳಿಗೆ ಇದರ ಬಗ್ಗೆ ನಿಗಾ ವಹಿಸಲು ಸೂಚಿಸಲಾಗಿದೆ.
ಗುರುವಾರದಂದು ಮೂರು ಹೊಸ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದೆ, ಅದರಲ್ಲಿ ಕುಂದಾಪುರ, ಉಡುಪಿ ಜಿಲ್ಲಾಸ್ಪತ್ರೆ ಮತ್ತು ಕೆಎಂಸಿ ಮಣಿಪಾಲದಲ್ಲಿ ದಾಖಲಾಗಿದ್ದಾರೆ. ಒಟ್ಟು ಇದುವರೆಗೆ 21 ಮಂದಿಯ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು 16 ಮಂದಿಯ ವರದಿ ನೆಗಡಟಿವ್ ಬಂದಿದ್ದು, ಇನ್ನು 8 ಮಂದಿಯ ವರದಿ ಬಾಕಿ ಇದೆ. ಜಿಲ್ಲೆಯಲ್ಲಿ 144 ಸೆಕ್ಷನ್ ಹಾಕಿದ್ದರೂ ನಡೆಯುವ ಯಕ್ಷಗಾನ, ಪೂಜೆ ಪುನಸ್ಕಾರಗಳಿಗೆ ಸರಿಯಾದ ಕ್ರಮ ತೆಗೆದುಕೊಳ್ಳಲಾಗುವುದು.
ಒಟ್ಟು 230 ಮಂದಿ ವಿದೇಶಿ ಪ್ರವಾಸಿಗರು ಉಡುಪಿಗೆ ಬಂದಿದ್ದು ಅವರ ಮೇಲೆ ಇಲಾಖೆ ನಿಗಾ ಇರಿಸಲಾಗಿದೆ. ಪ್ರತ್ಯೇಕ ವಾರ್ಡ್ ನ ಹೆಚ್ಚಿನ ಅಗತ್ಯ ಬಿದ್ದಲ್ಲಿ ಹೊಸದಾಗಿ ಕಟ್ಟಿರುವ ಜಿಲ್ಲಾ ಲೈಬ್ರೆರಿಯಲ್ಲಿ ವ್ಯವಸ್ಥೆ ಕಲ್ಪಿಸಲು ಬಳಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ತಿಳಿಸಿದರು.