ಕಾರ್ಕಳ, ಫೆ 21 : ಅಪರಿಚಿತ ಯುವಕರಿಬ್ಬರ ಮಾತಿಗೆ ಮರುಳಾಗಿ ದಾರಿಹೋಕರೊಬ್ಬರು ಮೊಬೈಲ್ ಕಳಕೊಂಡ ಘಟನೆ ಬೆಳ್ಮಣ್ ಚರ್ಚ್ ದ್ವಾರದ ಬಳಿಯಲ್ಲಿ ನಡೆದಿದೆ.
ಕಲ್ಯಾ ಕರುಣಾಕರ ಪೂಜಾರಿ(32) ಎಂಬವರು ಮೊಬೈಲ್ ಕಳೆದುಕೊಂಡವರು. ಗುರುವಾರ ಮಧ್ಯಾಹ್ನ 2.20 ರ ವೇಳೆಗೆ ಬೆಳ್ಮಣ್ ಬಸ್ ನಿಲ್ದಾಣದಿಂದ ಚರ್ಚ್ ದ್ವಾರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ಆರೋಪಿಗಳಿಬ್ಬರು ಈ ಕೃತ್ಯ ಎಸಗಿದ್ದಾರೆ. ಕುಕ್ಕಿಕಟ್ಟೆ ಎಲ್ಲಿ ಎಂದು ಮೊದಲಿಗೆ ವಿಚಾರಿಸಿದ ಅವರು, ಕೈಯಲ್ಲಿದ್ದ ಚೀಟಿ ತೋರಿಸಿ ಈ ನಂಬ್ರಕ್ಕೆ ತುರ್ತಾಗಿ ಕರೆ ಮಾಡಲು ಇದೆ. ನಿಮ್ಮಲ್ಲಿ ಇದ್ದ ಮೊಬೈಲ್ ನೀಡಿ ಎಂದಿದ್ದರು.
ಕರುಣಾಕರ ಪೂಜಾರಿ ಮೊಬೈಲ್ ನೀಡಲು ಮುಂದಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಹಿಡಿದೆಳೆದು ಪರಾರಿಯಾಗಿದ್ದಾರೆ.ಸಿಮ್ ಇದ್ದ ಮೈಕ್ರೋ ಮ್ಯಾಕ್ಸ್ ಕಂಪೆನಿಯ ಮೊಬೈಲ್ ಸೆಟ್ ಅದಾಗಿದ್ದು, ಅದರ ಮೌಲ್ಯ 4,000 ಆಗಿರುತ್ತದೆ.
ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.