Karavali
ಉಡುಪಿ: ಫಾ| ಮಹೇಶ್ ಆತ್ಮಹತ್ಯೆ - ವದಂತಿಗಳಿಗೆ ಕೊನೆ ಹಾಡಿದ 200 ಪುಟಗಳ 'ಅಂತಿಮ ತನಿಖಾ ವರದಿ'
- Fri, Mar 20 2020 08:58:51 AM
-
ಉಡುಪಿ, ಮಾ 20 ( Daijiworld News/SB): ಹಲವಾರು ಕೋಲಾಹಲಗಳಿಗೆ ಕಾರಣವಾಗಿದ್ದ , ಶಿರ್ವ ಡಾನ್ ಬೋಸ್ಕೊ ಶಾಲೆಯ ಪ್ರಿನ್ಸಿಪಾಲ್ ಫಾ|ಮಹೇಶ್ ಆತ್ಮಹತ್ಯೆ ನಡೆದು ಐದು ತಿಂಗಳು ಕಳೆದಿದ್ದು ಇದೀಗ ವಿಶೇಷ ತನಿಖಾಧಿಕಾರಿ ತಮ್ಮ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ದಕ್ಷ ಪೊಲೀಸ್ ಅಧಿಕಾರಿಯೆಂದು ಜನಮನ್ನಣೆ ಗಳಿಸಿದ ತನಿಖಾಧಿಕಾರಿ ಹಾಗೂ ಕಾಪು ಸರ್ಕಲ್ ಇನ್ಸೆಪೆಕ್ಟರ್ ಮಹೇಶ್ ಪ್ರಸಾದ್ ಅವರು ನಡೆಸಿದ ತನಿಖೆಯಲ್ಲಿ ಫಾ| ಮಹೇಶ್ ಕುರಿತು ಗೌಪ್ಯವಾಗಿದ್ದ ಹಲವಾರು ಮಹತ್ತರ ವಿಷಯಗಳು ಬೆಳಕಿಗೆ ಬಂದಿದ್ದು ಘಟನೆಯ ಕುರಿತು ಹಬ್ಬಿದ್ದ ಹಲವಾರು ಊಹಾಪೋಹಗಳಿಗೆ ತೆರೆಬಿದ್ದಾಂತಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ 200 ಕ್ಕಿಂತಲೂ ಹೆಚ್ಚು ಪುಟಗಳಿರುವ ಅಸಹಜ ಸಾವಿನ ಕುರಿತ ಅಂತಿಮ ತನಿಖಾ ವರದಿಯ ಪ್ರತಿಯು ಇದೀಗ ದಾಯ್ಜಿವರ್ಲ್ಡ್ ಸುದ್ದಿವಾಹಿನಿಗೆ ದೊರೆತಿದ್ದು , ಬಿಷಪ್, ಧರ್ಮಗುರುಗಳು, ಉಧ್ಯಮಿಗಳು, ಹಾಗೂ ಫಾ|ಮಹೇಶ್ ಅವರ ಕುಟುಂಬದ ಸದಸ್ಯರು, ಗೆಳೆಯರು ಒಳಗೊಂಡಂತೆ 95 ಕ್ಕಿಂತಲೂ ಹೆಚ್ಚು ಸಾಕ್ಷಿಗಳನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಫಾ|ಮಹೇಶ್ ಸಾವಿನ ಬಳಿಕ ಪೋಲಿಸರು ಅವರ ನಾಲ್ಕು ಮೊಬೈಲ್ ಫೋನುಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಮೊಬೈಲ್ ಪೋನುಗಳಲ್ಲಿರುವ ಸಂಭಾಷಣೆ ಹಾಗೂ ಸಂದೇಶಗಳ ಜಾಡು ಹಿಡಿದ ಪೋಲಿಸರು ಫಾ|ಮಹೇಶ್ ಈ ಮೊದಲು ಮೂರು ಭಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬುವುದನ್ನು ಪತ್ತೆಹಚ್ಚಿದ್ದಾರೆ. ದುಂದು ವೆಚ್ಚ ಹಾಗೂ ವಿಲಾಸಿ ಜೀವನಕ್ಕಾಗಿ ಇತರರಿಂದ ಹಣ ಪಡೆಯುವ ಗೀಳು ಕಂಡುಬಂದ ಕಾರಣ 1999 ರಲ್ಲಿ ಕಿರೆಂ ಎಂಬಲ್ಲಿಯ ಎಸ್ ವಿ ಡಿ ಸಂಸ್ಥೆಯು ಇವರನ್ನು ಸೆಮಿನರಿ ಬಿಟ್ಟು ತೆರಳುವಂತೆ ಸೂಚಿಸಿತ್ತು. ನಂತರ ಧರ್ಮಗುರುವಾಗುವ ಶಿಕ್ಷಣ ಪಡೆಯಲು ಮಂಗಳೂರು ಧರ್ಮಪ್ರಾಂತ್ಯದ ಸೆಮಿನರಿಗೆ ಪ್ರವೇಶಿಸಿದ ಅವರು ಅಲ್ಲಿಯೂ ಸಹ ಅಶಿಸ್ತಿನ ಜೀವನ ಮುಂದುವರೆಸಿದ್ದರಿಂದ ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಿ ಬಿಎಡ್ ಶಿಕ್ಷಣಕ್ಕೆ ಕಳುಹಿಸಿದ್ದರು. ಆದರೆ 2009 ರಲ್ಲಿ ಆಶಿಸ್ತು ಪುನರಾವರ್ತನೆ ಆಗಲ್ಲ ಎಂಬ ನಿಬಂಧನೆಯ ಮೇರೆಗೆ ಸೆಮಿನರಿಗೆ ಮರುಪ್ರವೇಶ ಪಡೆದಿದ್ದರು.
ಫಾ| ಮಹೇಶ್ ಅವರ ಮೊಬೈಲ್ ಫೋನುಗಳ ಮೇಲಿನ ತನಿಖೆಯು ಹಲವು ರಹಸ್ಯಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. 2015 ರಿಂದ ಆತ್ಮಹತ್ಯೆಗೈಯುವ ದಿನದವರೆಗೂ ಫಾ|ಮಹೇಶ್ ಅವರು ಐವರು ಮಹಿಳೆಯರೊಂದಿಗೆ, ನಿರಂತರ ಸಂಪರ್ಕವನ್ನು ಇಟ್ಟುಕೊಂಡಿದ್ದರು ಎಂಬ ಸತ್ಯ ಬಯಲಾಗಿದೆ. ಅನ್ಯಕೋಮಿನ ವಿವಾಹಿತ ಮಹಿಳೆಯೊಬ್ಬಳೂ ಈ ಪಟ್ಟಿಯಲ್ಲಿ ಒಳಗೊಂಡಿದ್ದಳು. ಫಾ| ಮಹೇಶ್ ಹಾಗೂ ಈ ಐವರು ಮಹಿಳೆಯರ ನಡುವೆ ನಿರಂತರ ಅಶ್ಲೀಲತೆಯಿಂದ ಕೂಡಿದ್ದ ಸಂಭಾಷಣೆಯು ನಡೆಯುತ್ತಿತ್ತು ಹಾಗೂ ಸಂದೇಶಗಳು ವಿನಿಮಯವಾಗುತ್ತಿದ್ದವು ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತನಿಖಾ ವರದಿಯು ಶಿರ್ವ ಚರ್ಚಿನ ಧರ್ಮಗುರು, ಸಹಾಯಕ ಧರ್ಮಗುರು ಹಾಗೂ ಫಾ| ಮಹೇಶ್ ಹೆತ್ತವರಿಗೆ ಮಹೇಶ್ ಅವರ ದುರ್ಗುಣಗಳ ಬಗ್ಗೆ ಪತ್ರ ಬರೆದಿದ್ದಾರೆಂದು ಆರೋಪಿಸಲ್ಪಟ್ಟ ಡಾನ್ ಬೋಸ್ಕೊ ಶಾಲೆಯ ಪೂರ್ವ ಶಿಕ್ಷಕರಿಗೆ ಕ್ಲೀನ್ ಚೀಟ್ ನೀಡಿದೆ.
ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ತನಿಖಾ ವರದಿಯ ಒಂದು ಭಾಗದಲ್ಲಿ ನೂತನ ಶಾಲಾ ಕಟ್ಟಡದ ಸಹಾಯಾರ್ಥವಾಗಿ 9 ದಾನಿಗಳು ದೊಡ್ಡ ಮೊತ್ತದ ಹಣವನ್ನು ಫಾ| ಮಹೇಶ್ ಅವರ ಶಿರ್ವ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ಆದರೆ ಫಾ|ಮಹೇಶ್ ಈ ಮೊತ್ತವನ್ನು ಶಾಲಾ ಖಾತೆಗೆ ವರ್ಗಾಯಿಸಿರಲಿಲ್ಲ ಎಂಬುದಾಗಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಇದಲ್ಲದೆ ಫಾ| ಮಹೇಶ್ ಹಲವು ಬಾರಿ ವಿವಿಧ ಕಾರಣಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಒಮ್ಮೆ ಅವರು ಸ್ವಯಂ ಪ್ರೇರಿತರಾಗಿ ದೇಹದ ತೂಕ ಕಡಿತಗೊಳಿಸುವ ನ್ಯೂರೋಪತಿ ಥೆರಪಿಗಾಗಿ ಧರ್ಮಸ್ಥಳದಲ್ಲಿರುವ ಆಯುರ್ವೇದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿ ತಿಳಿಸುತ್ತದೆ.
ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಗಂಟಲು ಬಿಗಿದು ಫಾ|ಮಹೇಶ್ ಸಾವು ಸಂಭವಿಸಿದ್ದು ಯಾವುದೇ ಪ್ರತಿರೋಧ, ದೈಹಿಕ ತಿಕ್ಕಾಟದ ಕುರುಹುಗಳು ದೇಹದಲ್ಲಿ ಕಂಡುಬಂದಿಲ್ಲ. ಸಾವು ಸಂಭವಿಸುವಾಗ ದೇಹದ ಒಳಗೆ ಯಾವುದೇ ರೀತಿಯ ವಿಷಾಂಶ ಹೊಕ್ಕಿಲ್ಲ ಹಾಗೂ ಯಾವುದೇ ರೀತಿಯ ಆಂತರಿಕ ಹೊಡೆತಗಳು ಕಂಡುಬಂದಿಲ್ಲ ಎಂದು ವರದಿಯಲ್ಲಿ ನಮೂದಿಸಲಾಗಿದೆ. ಇದರಿಂದ ಫಾ|ಮಹೇಶ್ ಅವರು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಕಂಡುಬಂದಾಗ ಅವರು ಕಾಲುಗಳು ನೆಲಕ್ಕೆ ತಾಗಿಕೊಂಡಿದ್ದ ಎಂಬ ಊಹಾಪೋಹಗಳಿಗೆ ವರದಿಯಲ್ಲೇ ತೆರೆ ಎಳೆದಂತಾಗಿದೆ ಹಾಗೂ ಸಾವು ಆತ್ಮಹತ್ಯೆಯಿಂದಲೇ ಸಂಭವಿಸಿದೆ ಎಂದು ಧೃಡೀಕರಿಸಲಾಗಿದೆ.
ತನಿಖೆಯ ವೇಳೆ ಕೆಲ ಸಾಕ್ಷಿಗಳು ಶಿರ್ವ ಇಗರ್ಜಿಯ ಪ್ರಧಾನ ಧರ್ಮಗುರುಗಳ ಹಾಗೂ ಫಾ|ಮಹೇಶ್ ಅವರ ನಡುವೆ ಉತ್ತಮ ಬಾಂಧವ್ಯವಿರಲಿಲ್ಲ ಎಂದು ಆರೋಪಿಸಿದ್ದರು. ಆದರೆ ಇದಕ್ಕೆ ತದ್ವಿರುದ್ಧವಾಗಿ ದೊಡ್ಡ ಸಂಖ್ಯೆಯ ಸಾಕ್ಷಿದಾರರು, ಧರ್ಮಗುರು ಹಾಗೂ ಫಾ| ಮಹೇಶ್ ನಡುವೆ ಯಾವುದೇ ಮನಸ್ತಾಪವಿರಲಿಲ್ಲ ಎಂದು ಸಾಕ್ಷಿ ನುಡಿದಿದ್ದರು. ತನಿಖೆಯ ವೇಳೆ ಅನಿವಾಸಿ ಭಾರತೀಯರೊಬ್ಬರು ಶಿರ್ವ ಧರ್ಮಗುರುಗಳು ಹಾಗೂ ಫಾ|ಮಹೇಶ್ 2019 ಅಕ್ಟೋಬರ್ 7 ರಂದು ಶಾಲಾ ಯೋಜನೆಗಳ ಬಗ್ಗೆ ಚರ್ಚಿಸಲು ಒಟ್ಟಾಗಿ ತಮ್ಮ ಮನೆಗೆ ಆಗಮಿಸಿದ್ದರು ಹಾಗೂ ಆ ಸಂದರ್ಭ ಅವರು ತುಂಬಾ ಅನ್ಯೋನ್ಯತೆಯಿಂದ ಇದ್ದಂತೆ ಕಂಡುಬಂದಿದ್ದರು ಎಂದು ಸಾಕ್ಷಿ ನುಡಿದಿದ್ದರು.
ಫಾ|ಮಹೇಶ್ ಆತ್ಮಹತ್ಯೆಗೈದ ಸಂಧರ್ಭದಲ್ಲಿ ಶಿರ್ವ ಇಗರ್ಜಿಯ ಧರ್ಮಗುರುಗಳು ಕುವೈತ್ ಗೆ ತೆರಳಿದ್ದು ಆತ್ಮಹತ್ಯೆಗೈಯುವ ಮೊದಲು ಇಬ್ಬರ ನಡುವೆ ವಾಟ್ಸಾಪ್ ಮೂಲಕ ಕುಶಲೋಪಚರಿಯ ಸಂದೇಶಗಳು ರವಾನೆಯಾಗಿದ್ದುವು. ಧರ್ಮಗುರುಗಳು ಕುವೈತ್ ನಲ್ಲಿ ನಡೆಯುವ ಕಾರ್ಯಕ್ರಮವೊಂದರ ಚಿತ್ರಗಳನ್ನು ಮಹೇಶ್ ರೊಂದಿಗೆ ಹಂಚಿಕೊಂಡಿದ್ದರು ಹಾಗೂ ಫಾ| ಮಹೇಶ್ ಡಾನ್ ಬೋಸ್ಕೊ ಶಾಲೆಯಲ್ಲಿ ಅಂದು ನಡೆದ ಕಾರ್ಯಕ್ರಮವೊಂದರ ಚಿತ್ರವನ್ನು ಧರ್ಮಗುರುಗಳಿಗೆ ಕಳುಹಿಸಿದ್ದರು. ತನಿಖಾ ವರದಿಯಲ್ಲಿ ಈ ಎಲ್ಲಾ ಘಟನೆಗಳನ್ನು ಸಾಕ್ಷ ಸಮೇತ ಉಲ್ಲೇಖಿಸಲಾಗಿದೆ.
ಫಾ|ಮಹೇಶ್ ಆತ್ಮಹತ್ಯೆ ಘಟನೆಗೆ ಸಂಬಂಧಿಸಿ ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿ ಸೋಜಾ ಎಂಬಾತನನ್ನು ಆತ್ಮಹತ್ಯಾ ಪ್ರೇರಣಾ ಪ್ರಕರಣ ಧಾಖಲಿಸಿ ಪೊಲೀಸರು ಬಂಧಿಸಿದ್ದರು ಹಾಗೂ ನ್ಯಾಯಾಲಯ ಅತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಮೊಬೈಲ್ ಸಂದೇಶಗಳ ಆಧಾರದಲ್ಲಿ ನಡೆದ ತನಿಖಾ ವರದಿಯ ಪ್ರಕಾರ ಫಾ| ಮಹೇಶ್ ಹಾಗೂ ಡೇವಿಡ್ ಪತ್ನಿ ಪ್ರಿಯಾ ನಿಕಟ ಸಂಪರ್ಕದಲ್ಲಿದ್ದರು. ಮೂರು ಬಾರಿ ಡೇವಿಡ್ ತನ್ನ ಪತ್ನಿಯೊಂದಿಗಿನ ಸಂಬಂಧ ನಿಲ್ಲಿಸಬೇಕೆಂದು ಫಾ| ಮಹೇಶ್ ಅವರಿಗೆ ಎಚ್ಚರಿಕೆ ನೀಡಿದ್ದನು. ಈ ಕುರಿತು ಡೇವಿಡ್ ಉಡುಪಿ ಧರ್ಮಪ್ರಾಂತ್ಯದ ಬಿಷಪರಿಗೂ ದೂರು ನೀಡಿದ್ದನು. ಯಾವುದೇ ಎಚ್ಚರಿಕೆಗಳಿಗೆ ಬಗ್ಗದ ಫಾ|ಮಹೇಶ್ ಅವರ ವರ್ತನೆಯನ್ನು ಕಂಡು ಕುಪಿತಗೊಂಡ ಡೇವಿಡ್ ಇಗರ್ಜಿಯ ಗಂಟೆ ಭಾರಿಸಿ ಫಾ|ಮಹೇಶ್ ಅವರ ಅನೈತಿಕ ಸಂಬಂಧ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಬಗ್ಗೆ ಬೆದರಿಕೆಯೊಡ್ಡಿದ್ದನು. ಡೇವಿಡ್ ಈಗ ನ್ಯಾಯಾಂಗ ಬಂಧನದಲ್ಲಿದ್ದು ಹೈಕೋರ್ಟ್ ಮುಖಾಂತರ ಜಾಮೀನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ತಿಳಿದು ಬಂದಿದೆ.
ತನಿಖಾ ವರದಿಯ ಹೆಚ್ಚಿನ ವಿವರಗಳನ್ನು ವಿವಿಧ ಭಾಗಗಳಾಗಿ ಪ್ರಕಟಿಸಲಾಗುವುದು.