ಉಳ್ಳಾಲ, ಮಾ 20 ( Daijiworld News/MSP): ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ವಠಾರದಲ್ಲಿ ಕೊರೊನಾ ಜಾಗೃತಿ ಮೂಡಿಸುವ ಸಲುವಾಗಿ ಮುಖದ್ವಾರದಲ್ಲಿ ಸಾರ್ವಜನಿಕರಿಗೆ ಕೈತೊಳೆಯಲು ಬೇಸಿನ್ ಮತ್ತು ಫೀವರ್ ಕ್ಲಿನಿಕ್ `ಜ್ವರ ಪರಿಶೀಲನಾ ಕೇಂದ್ರವನ್ನು ತೆರೆಯಲಾಗಿದೆ.
ದಿನನಿತ್ಯ ರೋಗಿಗಳು ಹಾಗೂ ರೋಗಿಗಳ ಜೊತೆಗೆ ರಾಜ್ಯದ ವಿವಿದೆಡೆಗಳಿಂದ ಜನ ಬರುತ್ತಾರೆ. ಕೇರಳ ಭಾಗದಿಂದಲೂ ಬರುವ ಮಂದಿ ಅನೇಕರಿರುತ್ತಾರೆ. ಇದನ್ನೆಲ್ಲಾ ಗಮನಿಸಿ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯ ಆಸ್ಪತ್ರೆ ಮುಖದ್ವಾರದಲ್ಲಿ ಗುರುವಾರದಿಂದ ಜನರಿಗೆ ಕೈತೊಳಯೆಲು ಸ್ಯಾನಿಟೈಸರ್ ಜತೆಗೆ ಬೇಸಿನ್ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಆಸ್ಪತ್ರೆಗೆ ತೆರಳುವ ಮುನ್ನ ಫೀವರ್ ಕ್ಲಿನಿಕ್ ಅನ್ನು ತೆರೆಯಲಾಗಿದೆ. ವೈದ್ಯಕೀಯ ವಿಭಾಗದ ಸುಮಾರು 15 ಮಂದಿಯ ತಂಡ ಹೊರಗಿನಿಂದ ಬರುವ ರೋಗಿಗಳನ್ನು ಕೋವಿಡ್ -19 ಸ್ಕ್ರೀನಿಂಗ್ ನಡೆಸಿ ಬಳಿಕ ಒಳಬಿಡಲಾಗುತ್ತಿದೆ. ಆಸ್ಪತ್ರೆ ಒಳಗಡೆ ಸಿಬ್ಬಂದಿ , ರೋಗಿಗಳು ನೂರಾರು ಸಂಖ್ಯೆಯಲ್ಲಿ ಇರುವುದರಿಂದ ಶಿಸ್ತುಕ್ರಮವನ್ನು ಜರಗಿಸಲಾಗಿದೆ ಎಂದು ಸಂಸ್ಥೆ ಆಡಳಿತ ಮಂಡಳಿ ತಿಳಿಸಿದೆ.
'ಮಾಸ್ಕ್ , ಹ್ಯಾಂಡ್ ರಬ್ ಆಸ್ಪತ್ರೆಯಿಂದ ಬರುವ ಎಲ್ಲರಿಗೂ ಪೂರೈಸಲು ಅಸಾಧ್ಯ. ಈ ನಿಟ್ಟಿನಲ್ಲಿ ಸಂಸ್ಥೆಯ ನಿರ್ವಹಣಾ ವಿಭಾಗದ ಮುಂದಾಳತ್ವದಲ್ಲಿ ವಾಷ್ ಬೇಸಿನ್ ಆರಂಭಿಸಲಾಗಿದೆ. ದೇಶಾದ್ಯಂತ ಕೊರೊನಾ ವೈರಾಣುವಿನ ಪ್ರಭಾವ ಕಡಿಮೆಯಾಗುವವರೆಗೂ ವಾಷ್ ಬೇಸಿನ್ ಅನ್ನು ಸಂಸ್ಥೆಯ ಇತರೆಡೆಯೂ ತೆರೆಯಲಾಗುವುದು. ಇದು ಸಾರ್ವಜನಿಕರಲ್ಲಿಯೂ ಹೆಚ್ಚಿನ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಕ್ರಮಕೈಗೊಳ್ಳಲಾಗಿದೆ ಎಂದು ನಿರ್ವಹಣಾ ವಿಭಾಗ ಮುಖ್ಯಸ್ಥರಾದ ಮುಸ್ತಾಫ ತಿಳಿಸಿದ್ದಾರೆ.
'ಯಾರಿಗೂ ಜ್ವರ ಬಂದಲ್ಲಿ ಆಸ್ಪತ್ರೆ ವಠಾರದ ಹೊರ ಆವರಣದಲ್ಲಿರುವ ಫೀವರ್ ಕ್ಲಿನಿಕ್ ನಲ್ಲಿ ಬಂದು ತಪಾಸಣೆ ನಡೆಸುವಂತೆ ಕೋರಲಾಗಿದೆ. ಹೊರಗಿನಿಂದ ಬಹಳಷ್ಟು ಸಂಖ್ಯೆಯಲ್ಲಿ ಜನ ಬರುವ ಹಿನ್ನೆಲೆಯಲ್ಲಿ ವಾಷ್ ಬೇಸಿನ್ ತೆರೆಯಲಾಗಿದೆ. ಆದುದರಿಂದ ಆಸ್ಪತ್ರೆಗೆ ಬರುವ ಹಾಗೂ ಹೊರಹೋಗುವ ಮಂದಿ ಕೈತೊಳೆದು ಹೋಗಬೇಕೆಂಬ ಉದ್ದೇಶ. - ಡಾ.ಸುನಿತಾ ಸಲ್ದಾನ್ಹ ಆಸ್ಪತ್ರೆ ಆಡಳಿತಾಧಿಕಾರಿ
ಕೋವಿಡ್ -19 ಹರಡದಂತೆ ಅಗತ್ಯ ಕ್ರಮ : ವೈದ್ಯಕೀಯ ಅಧೀಕ್ಷಕ
ಕೊರೊನಾ ಜಾಗೃತಿ ಮೂಡಿಸಲು ಮೂರು ದಿನಗಳಿಂದ ಯೆನೆಪೋಯ ಆಸ್ಪತ್ರೆ ವಠಾರದಲ್ಲಿ ಫೀವರ್ ಕ್ಲಿನಿಕ್ ತೆರೆಯಲಾಗಿದೆ. ದಿನಕ್ಕೆ 20-25 ರೋಗಿಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಅಗತ್ಯ ಬಿದ್ದಲ್ಲಿ ಐಸೊಲೇಷನ್ ವಾರ್ಡಲ್ಲಿ ದಾಖಲು ಮಾಡಲಾಗುತ್ತಿದೆ. ಈಗಾಗಲೇ ಮೂವರು ಐಸೊಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆದು ಕೋವಿಡ್-19 ನೆಗೆಟಿವ್ ಆಗಿ ಬಿಡುಗಡೆಗೊಂಡಿದ್ದಾರೆ. ಜನರಿಗೆ ತಿಳುವಳಿಕೆ ಮೂಡಿಸುವ ಕಾರ್ಯವನ್ನು ಆಸ್ಪತ್ರೆ ವತಿಯಿಂದ ಮಾಡಲಾಗುತ್ತಿದೆ. ಕೆಮ್ಮುವಾಗ, ಸೀನುವಾಗ ಕೈ, ಟವೆಲ್ ಇಡುವಂತೆ, ಅಂತರ ಕಾಪಾಡಿಕೊಳ್ಳುವಂತೆ, ಮಾಸ್ಕ್ ಧರಿಸಲು , ಕೈ ತೊಳೆಯುವ ಜಾಗೃತಿಯನ್ನು ಮೂಡಿಸುವ ಮೂಲಕ ಕೋವಿಡ್ -19 ಹರಡದಂತೆ ಎಚ್ಚರಿಕಾ ಕ್ರಮಗಳನ್ನು ಹೇಳಿಕೊಡಲಾಗುತ್ತಿದೆ. ಡಾ. ಎಸ್. ಪದ್ಮನಾಭ ವೈದ್ಯಕೀಯ ಅಧೀಕ್ಷಕರು