ಬಂಟ್ವಾಳ, ಮಾ 20 (DaijiworldNews/SM): ತಾಲೂಕಿನ ಪಿಲಿಮುಗೇರು ಗ್ರಾಮದ ಚೆನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ವಾಮದಪದವು ಎಂಬಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಮಹಿಳೆ ಯೋರ್ವಳ ಮನೆಗೆ ತಾಗಿಕೊಂಡು ಬಸ್ ನಿಲ್ದಾಣ ವನ್ನು ನಿರ್ಮಾಣ ಮಾಡುವುದು ಸರಿಯಲ್ಲ ಎಂದು ಸ್ಥಳೀಯರು ಸ್ಥಳಕ್ಕೆ ಜಮಾಯಿಸಿ ಬಸ್ ನಿಲ್ದಾಣ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಚೈನೈತ್ತೋಡಿ ಗ್ರಾಮ ಪಂಚಾಯತ್ ಗೆ ಸೇರಿದ ರಸ್ತೆ ಅಂಚಿನಲ್ಲಿ ಇರುವ ಕಟ್ಟಡದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ. ಈ ಕಟ್ಟಡದಲ್ಲಿ ಹಲವಾರು ವರ್ಷಗಳಿಂದ ಬಾಡಿಗೆಗೆ ಸೈಕಲ್ ಅಂಗಡಿಯೊಂದು ಕಾರ್ಯಚರಿಸುತ್ತಿತ್ತು. ಆದರೆ ಅವರಿಗೆ ಯಾವುದೇ ಸೂಚನೆ ನೀಡದೆ ಏಕಾಏಕಿ ಸೈಕಲ್ ಅಂಗಡಿಯನ್ನು ಕೆಡವಿ ಅ ಜಾಗದ ಜೊತೆಗೆ ಇನ್ನಷ್ಟು ಜಾಗವನ್ನು ಅತಿಕ್ರಮಣ ಮಾಡಿದ ಪಂಚಾಯತ್ ಬಸ್ ನಿಲ್ದಾಣ ಕಾಮಗಾರಿ ಅರಂಭಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜೊತೆಗೆ ಬಸ್ ನಿಲ್ದಾಣದ ಬಳಿಯಲ್ಲೇ ಹಲವಾರು ವರ್ಷಗಳಿಂದ ವಾಸವಾಗಿರುವ ಮಹಿಳೆಯೋರ್ವರ ಮನೆಯ ಛಾವಣಿಯ ಮೇಲೆ ಬಂದಿದ್ದು, ಇದರಿಂದ ಮಹಿಳೆಗೆ ತೊಂದರೆಯಾಗಿದೆ. ಬಸ್ ನಿಲ್ದಾಣ ನಿರ್ಮಾಣಕ್ಕೆ ಯಾವುದೇ ವಿರೋಧವಿಲ್ಲ ಆದರೆ ಹಳೆಯ ಕಟ್ಟಡದ ಜಾಗದಲ್ಲಿಯೇ ಬಸ್ ನಿಲ್ದಾಣ ನಿರ್ಮಾಣ ಮಾಡಿ ಬದಲಾಗಿ ಕಟ್ಟಡದ ಅಡಿ ಭಾಗದಿಂದ ಹೆಚ್ಚುವರಿಯಾಗಿ ಜಮೀನು ಅತಿಕ್ರಮಣ ಮಾಡಿ ಬಡ ಮಹಿಳೆಗೆ ತೊಂದರೆ ಕೊಡುವ ನಿಟ್ಟಿನಲ್ಲಿ ಅವರ ಮನೆಯ ಛಾವಣಿ ಮೇಲೆ ಬಸ್ ನಿಲ್ದಾಣದ ಸೀಟು ಬರುವ ರೀತಿಯಲ್ಲಿ ಕಾಮಗಾರಿ ಮಾಡಿದ್ದಾರೆ. ಇದಕ್ಕೆ ನಮ್ಮ ವಿರೋಧವೆಂದು ಸ್ಥಳೀಯರು ಬಸ್ ನಿಲ್ದಾಣ ಕಾಮಗಾರಿಗೆ ವಿರೋಧಿಸಿದ್ದಾರೆ.
ಪ್ರಸ್ತುತ ಬಸ್ ನಿಲ್ದಾಣ ಒಂದು ಅವೈಜ್ಞಾನಿಕ ಕಾಮಗಾರಿಯಾಗಿದ್ದು, ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮಾತ್ರವಲ್ಲದೆ ರಸ್ತೆಯ ಅಂಚಿನಲ್ಲೇ ಬಸ್ ನಿಲ್ದಾಣ ನಿರ್ಮಾಣ ಮಾಡಿರುವುದು ಅಪಘಾತಕ್ಕೆ ಇದು ಅಹ್ವಾನವಾಗಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.