ಕಾಸರಗೋಡು, ಮಾ 20 (DaijiworldNews/SM) : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ನೆರೆಯ ಜಿಲ್ಲೆಯಾದ ಕಾಸರಗೋಡಿನಲ್ಲಿ 9ನೇ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕಾಸರಗೋಡು ಆರೋಗ್ಯಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಕೊರೊನಾ ಶಂಕಿತರು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಪೈಕಿ 06 ಮಂದಿಯ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅವರ ವರದಿ ಇಂದು ಕೈಸೇರಿದ್ದು, ಕೊರೊನಾ ಸೋಂಕು ಪಾಸಿಟಿವ್ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಮಾ.19ರಂದು ಕಾಸರಗೋಡು ನಗರದ ಹೊರವಲಯದ ವ್ಯಕ್ತಿಯೋರ್ವರಲ್ಲಿ ದೃಢಪಟ್ಟಿದ್ದ ಕೊರೊನಾ ಸೋಂಕು, ಗುರುವಾರದ ತನಕ ಒಟ್ಟು 03 ಮಂದಿಯಲ್ಲಿ ದೃಢಪಟ್ಟಿತ್ತು. ಇದೀಗ ಮತ್ತೆ 06 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು 09 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಕೇರಳ ಸರಕಾರ ಸೇರಿದಂತೆ ಕಾಸರಗೋಡು ಜಿಲ್ಲಾಡಳಿತ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ. ಜನತೆಯು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಒಂದು ವಾರಗಳ ಕಾಲ ಕಾಸರಗೋಡು ಜಿಲ್ಲೆಯಲ್ಲಿ ಸರಕಾರಿ ಕಚೇರಿಗಳು ಬಂದ್ ಮಾಡಿ ಆದೇಶಿಸಲಾಗಿದೆ. ಅಂಗಡಿಗಳು ಬೆಳಿಗ್ಗೆ 11 ರಿಂದ 5 ಗಂಟೆ ತನಕ ಮಾತ್ರ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ವಿವಾಹ ಸೇರಿದಂತೆ ಇತರ ಯಾವುದೇ ಕಾರ್ಯಕ್ರಮ ನಡೆಸದಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.