ಕಡಬ, ಮಾ 20 (DaijiworldNews/SM): ಸ್ನಾನಕ್ಕೆಂದು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಶುಕ್ರವಾರ ಸಂಜೆ ಇಲ್ಲಿನ ಇಚಿಲಂಪಾಡಿಯಲ್ಲಿ ನಡೆದಿದೆ.
ಇಚಿಲಂಪಾಡಿ ಗ್ರಾಮದ ಕಲ್ಯ ನಿವಾಸಿಗಳಾದ ಸುಂದರ ಗೌಡ ಎಂಬವರ ಪುತ್ರ ಗುರುನಂದನ್(23) ಹಾಗೂ ಸುಬ್ರಾಯ ಎಂಬವರ ಪುತ್ರ ವೆಂಕಟೇಶ್ (22) ಮೃತಪಟ್ಟ ಯುವಕರು ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಸಹೋದರಿಯರ ಜೊತೆಗೂಡಿ ಐವರು ಇಚಿಲಂಪಾಡಿ ಸಮೀಪ ಕೆಂಪುಹೊಳೆಗೆ ಸ್ನಾನಕ್ಕೆಂದು ತೆರಳಿದ್ದರು. ಈ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕೆಂಪುಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ಗುರುನಂದನ್ ಮುಳುಗುತ್ತಿದ್ದ. ಆತನನ್ನು ರಕ್ಷಿಸಲೆಂದು ನೀರಿಗಿಳಿದ ವೆಂಕಟೇಶ್ ಸಹ ನೀರಿನಲ್ಲಿ ಮುಳುಗಿದ್ದಾನೆ. ತಕ್ಷಣವೇ ಉಳಿದವರು ಬೊಬ್ಬೆ ಹಾಕಿದ್ದಾರೆ. ಹಾಗೂ ಮನೆಗೆ ಆಗಮಿಸಿ ವಿಷಯ ತಿಳಿಸಿದ್ದಾರೆ. ಊರವರು ಆಗಮಿಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಶುಕ್ರವಾರ ರಾತ್ರಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಕಡಬ ಠಾಣಾ ಸಬ್ ಇನ್ಸ್ಪೆಕ್ಟರ್ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.