ಮಂಗಳೂರು, ಮಾ 20 (DaijiworldNews/SM): ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಈಗಾಗಲೇ ನೆರೆಯ ಜಿಲ್ಲೆ ಕಾಸರಗೋಡುನಲ್ಲಿ ಇಲ್ಲಿಯ ತನಕ ಒಂಬತ್ತು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ನಡುವೆ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಮಾಡಿದ್ದಾರೆ.
ಸೋಂಕು ತನ್ನ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಪರಿಣಾಮ ನೆರೆಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಾಸರಗೋಡು ಜಿಲ್ಲೆಯಿಂದ ಮಂಗಳೂರಿಗೆ ಅಧಿಕ ಸಂಖ್ಯೆಯಲ್ಲಿ ಜನರು ವಿವಿಧ ಕೆಲಸ ಕಾರ್ಯಗಳಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಎಲ್ಲಾ ರೀತಿಯ ವಾಹನ ಸಂಚಾರವನ್ನು ಉಭಯ ಜಿಲ್ಲೆಗಳ ನಡುವೆ ನಿಷೇಧಿಸಲಾಗಿದೆ. ಮಾರ್ಚ್ 21ರ ಮಧ್ಯಾಹ್ನ 2 ಗಂಟೆಯಿಂದ ಮಾರ್ಚ್ 31ರ ತನಕ ವಾಹನ ಸಂಚಾರ ನಿಷೇಧವಿದೆ. ತುರ್ತು ಪ್ರಕರಣಗಳನ್ನು ತಲಪಾಡಿ ಟೋಲ್ ಗೇಟ್ ಮೂಲಕ ಮಾತ್ರವೇ ತೆರಳಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ಗಡಿ ಪ್ರದೇಶಗಳಾದ ಮಂಜೇಶ್ವರ ತೂಮಿನಾಡು ರಸ್ತೆ, ಕೆದಂಬಾಡಿ ಪದವು ರಸ್ತೆ , ಸುಂಕದಕಟ್ಟೆ ಮುಡಿಪು ರಸ್ತೆ, ಕುರುಡ ಪದವು ಲಾಲ್ಬಾಗ್ ರಸ್ತೆ , ಮುಳಿಗದ್ದೆ ಬಾಯಾರು ರಸ್ತೆ, ಬೆರಿಪದವು ಪೆರುವಾಯಿ ರಸ್ತೆ , ಸ್ವರ್ಗ ಆರ್ಲಪದವು ರಸ್ತೆ , ಆರ್ಲಪದವು ಸ್ವರ್ಗ ರಸ್ತೆ , ಆದೂರು ಕೊಟ್ಟಿಯಾಡಿ ರಸ್ತೆ , ಪಳ್ಳತ್ತೂರು ಈಶ್ವರ ಮಂಗಳ ರಸ್ತೆ , ಗಾಳಿಮುಗ ಈಶ್ವರ ಮಂಗಳ ದೇಲಂಪಾಡಿ ರಸ್ತೆ , ನಾಟೆಕಲ್ ಸುಳ್ಯಪದವು ರಸ್ತೆ ಸಂಚಾರವನ್ನು ಶನಿವಾರದಿಂದ ಬಂದ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.