ಮಂಗಳೂರು, ಮಾ21 ( Daijiworld News/MSP): ಕರೊನಾ ವೈರಸ್ ಹರಡುತ್ತಿರುವುದನ್ನು ತಡೆಯವ ನಿಟ್ಟಿನಲ್ಲಿ ದ.ಕ ಜಿಲ್ಲಾಡಳಿತ ಕೇರಳ - ಕರ್ನಾಟಕ ಗಡಿಭಾಗದ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ. ಇದೀಗ ಇದರೊಂದಿಗೆ ಮಂಗಳೂರು ಹಳೆ ಬಂದರಿಗೆ ಪ್ರಯಾಣಿಕ ನಾವೆಗಳ ಆಗಮನ ಮತ್ತು ನಿರ್ಗಮನಕ್ಕೂ ನಿಷೇಧಿಸಿ ಆದೇಶ ಹೊರಡಿಸಿದೆ.
ಮಾ. 21 ರ ಮಧ್ಯಾಹ್ನ 2 ಗಂಟೆಯಿಂದ ಮಾ.31 ರ ಮಧ್ಯರಾತ್ರಿ 2 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಿದ್ದು ತುರ್ತು ಸೇವೆಗಳ ವಾಹನ ಮತ್ತು ಅವಶ್ಯಕ ವಸ್ತುಗಳ ಕಾಯಿದೆಯಲ್ಲಿ ನಮೂದಿಸಿರುವ ಅವಶ್ಯಕ ವಸ್ತುಗಳ ಸಾಗಾಣಿಕೆಯ ವಾಹನಗಳನ್ನು ಮಾತ್ರ ತಲಪಾಡಿ ಚೆಕ್ ಪೋಸ್ಟ್ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ.
ಮಾ.31 ರ ರಾತ್ರಿ 2 ಗಂಟೆಯವರೆಗೆ ಪ್ರಯಾಣಿಕ ನಾವೆಗಳ ಬಂದರು ಪ್ರವೇಶ ನಿಷೇಧಿಸಲಾಗಿದೆ. ಇನ್ನು ಈಗಾಗಲೇ ದ.ಕನ್ನಡ ಮತ್ತು ಕಾಸರಗೋಡು ಉಭಯ ಜಿಲ್ಲೆಯ ವತಿಯಿಂದಲೂ ಗಡಿ ಭಾಗದಲ್ಲಿ ಅತ್ತಿಂದಿತ್ತ ವಾಹನ ಸಂಚಾರಿಸದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.